ADVERTISEMENT

ಪಿಎಂ ಹೆಸರು ಘೋಷಣೆ ಸಂವಿಧಾನ ವಿರೋಧಿ

‘ಸೈದ್ಧಾಂತಿಕ ಸಂವಿಧಾನ’ ಕುರಿತ ರಾಜ್ಯಮಟ್ಟದ ಸಮಾವೇಶದಲ್ಲಿ ಪ್ರೊ. ಬರಗೂರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 0:29 IST
Last Updated 1 ಏಪ್ರಿಲ್ 2019, 0:29 IST
ಸಮಾವೇಶ ಉದ್ಘಾಟಿಸಿದ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿದರು. ಲೇಖಕರಾದ ಡಾ.ನಾಗಭೂಷಣ ಬಗ್ಗನಡು, ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಡಾ.ಓ.ನಾಗರಾಜ್ ಇದ್ದರು
ಸಮಾವೇಶ ಉದ್ಘಾಟಿಸಿದ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿದರು. ಲೇಖಕರಾದ ಡಾ.ನಾಗಭೂಷಣ ಬಗ್ಗನಡು, ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಡಾ.ಓ.ನಾಗರಾಜ್ ಇದ್ದರು   

ತುಮಕೂರು: ‘ಚುನಾವಣೆ ಸಂದರ್ಭದಲ್ಲಿ ನಮ್ಮ ಮುಂದಿನ ಪ್ರಧಾನಿ ಇಂಥವರೇ. ಮುಂದಿನ ಮುಖ್ಯಮಂತ್ರಿ ಇವರೇ ಎಂದು ರಾಜಕೀಯ ಪಕ್ಷಗಳು ಘೋಷಣೆ ಮಾಡುತ್ತಿವೆ. ಈ ರೀತಿ ಘೋಷಣೆ ಮಾಡುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಆಶಯಕ್ಕೆ ವಿರುದ್ಧವಾದುದು’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ಬಂಡಾಯ ಸಾಹಿತ್ಯ ಸಂಘಟನೆಯು ನಗರದ ರವೀಂದ್ರ ಕಲಾ ನಿಕೇತನದಲ್ಲಿ ಆಯೋಜಿಸಿದ್ಧ ‘ಸೈದ್ಧಾಂತಿಕ ಸಂವಿಧಾನ’ ಕುರಿತ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಮೊದಲೇ ನಿರ್ದಿಷ್ಟ ವ್ಯಕ್ತಿ ಹೆಸರು ಸೂಚಿಸಿ ಘೋಷಣೆ ಮಾಡುವುದಾದರೆ ಚುನಾವಣೆಗೇ ಅರ್ಥವಿಲ್ಲ. ಹಾಗಾದರೆ ನಾವೇಕೆ ಸಂಸದರನ್ನು, ಶಾಸಕರನ್ನು ಆಯ್ಕೆ ಮಾಡಿ ಕಳಿಸಬೇಕು’ ಎಂದು ಬರಗೂರು ಪ್ರಶ್ನಿಸಿದರು.

ADVERTISEMENT

‘ಏಕ ನಾಯಕತ್ವ, ಏಕ ಧರ್ಮ, ಏಕ ತೆರಿಗೆ ಹೀಗೆ ಏಕ ಮನೋಭಾವ ಸೃಷ್ಟಿ ನಡೆಯುತ್ತಿದ್ದು, ಇದು ದೇಶಕ್ಕೆ ಗಂಡಾಂತರದ ಮುನ್ಸೂಚನೆ. ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುವುದು ಭ್ರಮೆ. ತಿದ್ದುಪಡಿ ಮಾಡಬಹುದಷ್ಟೇ’ ಎಂದರು.

ನಾಲಿಗೆ ಸ್ವಚ್ಛಗೊಳಿಸಿ: ‘ಕೆಲವರು ದೇಶದ ಪ್ರಜಾಪ್ರಭುತ್ವ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ, ಸಮಾಜದ ಶಾಂತಿ ಕದಡುವ ರೀತಿ ನಾಲಿಗೆ ಹರಿಬಿಡುತ್ತಿದ್ದಾರೆ. ಇಂಥವರ ನಾಲಿಗೆಯನ್ನು ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛಗೊಳಿಸಬೇಕಾಗಿದೆ’ ಎಂದು ಹೇಳಿದರು.

‘ಮನುಸ್ಮೃತಿಯನ್ನು ನಿತ್ಯ ಸುಡಬೇಕು’
‘ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟು ಹಾಕಿದರು. ಆಗ ಮನು ಒಬ್ಬನೇ ಇದ್ದ. ಈಗ ಎಲ್ಲೆಡೆ ಇದ್ದಾರೆ. ಮನುಸ್ಮೃತಿ ಸುಟ್ಟರೂ ಅದು ಮತ್ತೆ ಮತ್ತೆ ಹುಟ್ಟುತ್ತದೆ. ಅದನ್ನು ನಿತ್ಯ ಸುಟ್ಟುಹಾಕಬೇಕು’ ಎಂದುಲೇಖಕ ಡಾ.ಬಸವರಾಜ ಸಬರದ ಹೇಳಿದರು.

'ಮನುಸ್ಮೃತಿ ವಿರೋಧಿಸಿದ್ದಕ್ಕೆ ಇಳಕಲ್ ಸ್ವಾಮೀಜಿ, ಗದುಗಿನ ಸಿದ್ಧಲಿಂಗ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಸತ್ತು ಹೋದರು ಎಂದು ಮನುಸ್ಮೃತಿ ಪಾಲಕರು ಬಣ್ಣ ಹಚ್ಚಿ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಯಾರೂ ಶೂದ್ರರೋ, ಶೋಷಣೆಗೊಳಗಾಗಿದ್ದಾರೋ ಅವರೇ ಇವತ್ತು ಮನುಸ್ಮೃತಿ ಪ್ರಚಾರಕರಾಗಿದ್ದಾರೆ. ಇಂಥವರಿಗೆ ಮನುಸ್ಮೃತಿಗೆ ಪರ್ಯಾಯ ನಮ್ಮ ಭಾರತ ಸಂವಿಧಾನ ಎಂದು ಹೇಳಿ ಸಂವಿಧಾನದ ಆಶಯಗಳನ್ನು ಮನವರಿಕೆ ಮಾಡಿಕೊಡಬೇಕಾಗಿದೆ’ ಎಂದು ತಿಳಿಸಿದರು.

‘99 ಉಪಜಾತಿ ಕೂಡಿಸಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಅಣಿಯಾದರೆ ಈ ಹೋರಾಟದಲ್ಲಿದ್ದ ಜಗದ್ಗುರುಗಳಲ್ಲಿ ಶೇ 90 ರಷ್ಟು ಮಂದಿ ಮನುಸ್ಮೃತಿ ಪರಂಪರೆ ಮುಂದುವರಿಸುವಂಥವರೇ’ ಎಂದು ಆರೋಪಿಸಿದರು.

ಲೇಖಕಿ ಭಾನು ಮುಷ್ತಾಕ್ ಮಾತನಾಡಿ, ಸಂವಿಧಾನವನ್ನು ಬೇಕಾದಂತೆ ಬಳಕೆ ಮಾಡಿಕೊಂಡರೆ ಅದು ಅರಾಜಕತೆಗೆ ಕಾರಣವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.