ADVERTISEMENT

ಕಾಮೇಗೌಡರ ಜಲಕ್ರಾಂತಿ ಶ್ಲಾಘಿಸಿದ ಪ್ರಧಾನಿ ಮೋದಿ

ಮೋದಿ ‘ಮನದ ಮಾತು’ ಕಾರ್ಯಕ್ರಮದಲ್ಲಿ ಮಳವಳ್ಳಿಯ ದಾಸನದೊಡ್ಡಿಯ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 20:26 IST
Last Updated 28 ಜೂನ್ 2020, 20:26 IST
ತಾವು ನಿರ್ಮಿಸಿರುವ ಕೆರೆಯ ಜೊತೆ ಕಾಮೇಗೌಡ
ತಾವು ನಿರ್ಮಿಸಿರುವ ಕೆರೆಯ ಜೊತೆ ಕಾಮೇಗೌಡ   

ನವದೆಹಲಿ/ಮಂಡ್ಯ:ಮಂಡ್ಯ ಜಿಲ್ಲೆಯ ರೈತ ಕಾಮೇಗೌಡ ಅವರ ಜಲಕ್ರಾಂತಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ‘ಮನದ ಮಾತು’ ತಿಂಗಳ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ 83 ವರ್ಷದ ಕಾಮೇಗೌಡರ ಕೆಲಸವನ್ನು ಕೊಂಡಾಡಿದ್ದಾರೆ.

ಕಾಮೇಗೌಡ ಅವರು ತಮ್ಮ ಇಳಿ ವಯಸ್ಸಿನಲ್ಲಿ ಕುರಿ, ಮೇಕೆಗಳನ್ನು ಮೇಯಿಸುತ್ತಾ, ನೀರಿನ ಸಂರಕ್ಷಣೆ ಮಾಡುತ್ತಿದ್ದಾರೆ. ತಮ್ಮ ಜಮೀನು ಹಾಗೂ ಸಮೀಪದ ಜಾಗದಲ್ಲಿ ಒಟ್ಟು 16 ಸಣ್ಣ ಕೆರೆ–ಕಟ್ಟೆಗಳನ್ನು ಕಟ್ಟಿಸಿದ್ದಾರೆ.

‘ನೀರಿನ ಕೊರತೆಯನ್ನು ನೀಗಿಸಲು ಗೌಡರು ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಲು ಶುರು ಮಾಡಿದರು. ಕಠಿಣ ಪರಿಶ್ರಮದ ಮೂಲಕ ತಮ್ಮ ಬೆವರು ಹರಿಸಿದರು. ಈ ಮೂಲಕ ಬೃಹತ್ ಪ್ರಮಾಣದ ನೀರು ಸಂಗ್ರಹಿಸಿದರು. ಅವರು ನಿರ್ಮಿಸಿದ ಕೆರೆಗಳು ಗಾತ್ರದಲ್ಲಿ ಚಿಕ್ಕವಾದರೂ, ಅವರ ಪರಿಶ್ರಮ ಮಾತ್ರ ದೊಡ್ಡದು. ಅವರ ಈ ಯತ್ನದಿಂದ ಇಡೀ ಪ್ರದೇಶದ ಸ್ವರೂಪವೇ ಬದಲಾಗಿದೆ’ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

ADVERTISEMENT

‘ಕುರಿಗಳಿಗೆ ನೀರಿನ ಅಭಾವ ಕಾಡಿತು. ಕಾಮೇಗೌಡರು ಕುರಿಗಳಿಗಾಗಿ ಕೆರೆ ಕಟ್ಟಿಸಲು ಮುಂದಾದರು. ಮಳೆಯಿಂದ ಅವು ತುಂಬಿದವು. ಬರಗಾಲದಲ್ಲೂ ಕೆರೆಗಳು ನೀರಿನಿಂದ ಕಂಗೊಳಿಸುತ್ತಿವೆ’ ಎಂದು ಜಲಕ್ರಾಂತಿ ಉಂಟಾದ ಬಗೆಯನ್ನು ಪ್ರಧಾನಿ ವಿವರಿಸಿದ್ದಾರೆ.

‘ನಮ್ಮ ಪುಟ್ಟ ಸಹಾಯ ಪರಿಸರದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಲ್ಲದು. ದೇಶದ ಹಲವು ಜನರು ಇಂತಹ ಅಭೂತಪೂರ್ವ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

ನರಸಿಂಹ ರಾವ್ ಸ್ಮರಣೆ: ಕಾಂಗ್ರೆಸ್‌ನ ವಂಶಾಡಳಿತದ ಬಗ್ಗೆ ಬಿಜೆಪಿ ಅಭಿಯಾನವನ್ನೇ ಕೈಗೊಂಡಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಕಾಂಗ್ರೆಸ್‌ನ ನರಸಿಂಹ ರಾವ್ ಅವರನ್ನು ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಸ್ಮರಿಸಿಕೊಂಡಿದ್ದಾರೆ. ರಾವ್ ಅವರ ವಿನಮ್ರ ಹಿನ್ನೆಲೆಯನ್ನು ಪ್ರಸ್ತಾಪಿಸಿರುವ ಪ್ರಧಾನಿ, ಭಾರತದ ನೀತಿಗಳೊಂದಿಗೆ ಸಂಪರ್ಕ ಹೊಂದಿದ್ದ ನಾಯಕ ಎಂದು ಹೇಳಿದ್ದಾರೆ.

ರಾವ್ ಅವರು ಕಷ್ಟಕಾಲದಲ್ಲಿ ದೇಶ ಮುನ್ನಡೆಸಿದ್ದರು ಎಂದು ಮೋದಿ ಹೇಳಿದ್ದಾರೆ.ನರಸಿಂಹ ರಾವ್‌ ಅವರು ನೆಹರೂ ಕುಟುಂಬದ ಹೊರತಾಗಿ ಪ್ರಧಾನಿ ಹುದ್ದೆಗೇರಿದ ಮೂರನೇ ವ್ಯಕ್ತಿ.

ರಕ್ಷಣಾ ಸ್ವಾವಲಂಬನೆ ಗುರಿ
ದೇಶವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬೇಕಿದೆ ಎಂದು ಪ್ರಧಾನಿ ಹೇಳಿದ್ದಾರೆ.‘ಸ್ವಾತಂತ್ರ್ಯ ಪೂರ್ವದಲ್ಲಿಯೇರಕ್ಷಣಾ ಸಾಮಗ್ರಿ ತಯಾರಿಕೆಯಲ್ಲಿ ಭಾರತ ಹಲವು ದೇಶಗಳಿಗಿಂತ ಮುಂದಿತ್ತು. ತಂತ್ರಜ್ಞಾನದ ಲಾಭವನ್ನು ಪಡೆದು ಮುಂದುವರಿಯಬೇಕಾದ ನಾವು ಹಾಗೆ ಮಾಡಲಿಲ್ಲ. ಈ ವಿಚಾರದಲ್ಲಿ ನಮಗಿಂತ ಹಿಂದಿದ್ದ ಬಹಳಷ್ಟು ದೇಶಗಳು ಈಗ ನಮ್ಮನ್ನು ದಾಟಿ ಮುಂದೆ ಸಾಗಿವೆ. ಈ ದಿಸೆಯಲ್ಲಿ ಹೆಚ್ಚು ಕೆಲಸ ಆಗಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಭಾರತ ಪಟ್ಟು ಬಿಡದೆ ಮುನ್ನುಗ್ಗುತ್ತಿದೆ. ಈ ವಿಚಾರದಲ್ಲಿ ದೇಶ ಸ್ವಾವಲಂಬನೆಯತ್ತ ಸಾಗುತ್ತಿದೆ. ಭಾರತವು ಸ್ವಾವಲಂಬನೆ ಸಾಧಿಸಲು ಸರ್ಕಾರದ ಜೊತೆ ಜನರ ಪಾಲ್ಗೊಳ್ಳುವಿಕೆ ಅಗತ್ಯ’ ಎಂದು ಪ್ರಧಾನಿ ಒತ್ತಿ ಹೇಳಿದರು.

ಕಾಮೇಗೌಡ ಸಂತಸ
‘ಸಾಮಾನ್ಯ ಪ್ರಜೆಯನ್ನೂ ಗುರುತಿಸುವ ಮೋದಿ ಅವರು ದೇಶಕ್ಕಾಗಿ ದುಡಿಯುತ್ತಿದ್ದಾರೆ. ಕೊರೊನಾ ಸೋಂಕಿನ ನಡುವೆಯೂ ಸೇವೆಯನ್ನು ಗುರುತಿಸಿದ್ದಾರೆ. ನನ್ನಂತಹ ಬಡ ವ್ಯಕ್ತಿಯ ಕೆಲಸ ಪ್ರಸ್ತಾಪ ಮಾಡುವ ಮೂಲಕ ಅವರು ದೊಡ್ಡವ ರೆನಿಸಿಕೊಂಡಿದ್ದಾರೆ’ ಎಂದು ಕಾಮೇಗೌಡ ಪ್ರತಿಕ್ರಿಯಿಸಿದರು.

ವಿಡಿಯೊ ಸಂವಾದ: ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೊ ಕಾಲ್ ಮಾಡಿ ಕಾಮೇಗೌಡರೊಂದಿಗೆ ಮಾತನಾಡಿದರು. ಅವರ ಕೆಲಸಗಳನ್ನು ಶ್ಲಾಘಿಸಿ, ಸೇವೆ ಮುಂದುವರಿಸುವಂತೆ ಮನವಿ ಮಾಡಿದರು.

ಕಟ್ಟೆಯಿಂದ ಕಟ್ಟೆಗೆ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು ಎಂದು ಕಾಮೇಗೌಡರು ಈ ಸಂದರ್ಭದಲ್ಲಿ ಸಚಿವರಿಗೆ ಮನವಿ ಮಾಡಿದರು. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

*
ಕಾಮೇಗೌಡ ರೈತರಾದರೂ ವ್ಯಕ್ತಿತ್ವ ಅಸಾಧಾರಣ. ಅವರ ಸಾಧನೆ ದಿಗ್ಭ್ರಮೆಗೊಳಿಸುವಂಥದ್ದು. ಕುರಿ ಮೇಯಿಸುತ್ತಲೇ ಕೆರೆ ಕಟ್ಟಿಸಿದ್ದು ಸಾಧಾರಣ ಕೆಲಸವಲ್ಲ.
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.