ADVERTISEMENT

ಮೋದಿ, ಬಿಎಸ್‌ವೈ ಮಾತುಕತೆ; ಮೈಕ್ರೊ ಕಂಟೈನ್ಮೆಂಟ್ ವಲಯಗಳತ್ತ ಗಮನ ನೀಡಲು ಸಲಹೆ

ಕೋವಿಡ್‌–19

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 8:41 IST
Last Updated 11 ಏಪ್ರಿಲ್ 2021, 8:41 IST
ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಬಿ.ಎಸ್‌.ಯಡಿಯೂರಪ್ಪ–ಸಾಂದರ್ಭಿಕ ಚಿತ್ರ
ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಬಿ.ಎಸ್‌.ಯಡಿಯೂರಪ್ಪ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌–19 ತಡೆಗಟ್ಟುವ ನಿಟ್ಟಿನಲ್ಲಿ ಮೈಕ್ರೊ ಕಂಟೈನ್ಮೆಂಟ್‌ ವಲಯಗಳ ಕಡೆಗೆ ಗಮನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಭಾನುವಾರ ಪ್ರಧಾನಿ ಮೋದಿ ಅವರೊಂದಿಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ.

'ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಇಂದು ಮಾತನಾಡಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ರಾಜ್ಯದ ಕ್ರಮಗಳ ಬಗ್ಗೆ ಪ್ರಧಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಮೈಕ್ರೊ ಕಂಟೈನ್ಮೆಂಟ್ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದ್ದಾರೆ' ಎಂದು ಸಿಎಂ ಟ್ವೀಟಿಸಿದ್ದಾರೆ.

ADVERTISEMENT

ಗುರುವಾರ ಪ್ರಧಾನಿ ಜೊತೆಗಿನ ವಿಡಿಯೊ ಕಾನ್ಫರೆನ್ಸ್‌ ಬಳಿಕ ರಾಜ್ಯದಲ್ಲಿ ಕೊರೊನಾ (ರಾತ್ರಿ) ಕರ್ಫ್ಯೂ ಜಾರಿ ಮಾಡುವ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ಪ್ರಕಟಿಸಿದ್ದರು. ಬೆಂಗಳೂರು ಸೇರಿದಂತೆ ರಾಜ್ಯದ ಏಳು ಜಿಲ್ಲಾ ಕೇಂದ್ರಗಳು ಹಾಗೂ ಮಣಿಪಾಲದಲ್ಲಿ ಏಪ್ರಿಲ್‌ 10ರಿಂದ 20ರ ವರೆಗೂ ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೂ ಕರ್ಫ್ಯೂ ವಿಧಿಸಲಾಗಿದೆ.

ಲಸಿಕೆ ಆಂದೋಲನದ (ಟೀಕಾ ಉತ್ಸವ) ಬಗ್ಗೆ ಟ್ವೀಟಿಸಿರುವ ಸಿಎಂ ಕಾರ್ಯಾಲಯ, 'ಕೊರೊನಾ ವಿರುದ್ಧದ ನಮ್ಮ ಸಮರದಲ್ಲಿ ಲಸಿಕೆ ನಮ್ಮ ಸುರಕ್ಷಾ ಕವಚವಾಗಿದೆ. 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ, ನಿಮ್ಮ ಕುಟುಂಬದ, ನೆರೆಹೊರೆಯ ಅರ್ಹರಿಗೆ ಲಸಿಕೆ ಪಡೆಯಲು ಪ್ರೇರೇಪಿಸಿ, ಜಾಗೃತಿ ಮೂಡಿಸಿ. ಇಂದಿನಿಂದ ಏಪ್ರಿಲ್ 14 ರವರೆಗೆ 'ಲಸಿಕೆ ಉತ್ಸವ'ದಲ್ಲಿ ಪಾಲ್ಗೊಳ್ಳಿ. ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ' ಎಂದಿದೆ.

ಏಪ್ರಿಲ್‌ನಿಂದ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಕೆಲವು ದಿನಗಳಿಂದ ನಿತ್ಯ ಸುಮಾರು 7,000 ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಶನಿವಾರ ಸಂಜೆವರೆಗೂ ಕರ್ನಾಟಕದಲ್ಲಿ ಒಟ್ಟು 61,653 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.