ADVERTISEMENT

ನದಿಮೂಲಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ: ಪಿ.ಎಂ. ನರೇಂದ್ರ ಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:38 IST
Last Updated 16 ಜೂನ್ 2025, 15:38 IST
ಪಿ.ಎಂ. ನರೇಂದ್ರ ಸ್ವಾಮಿ
ಪಿ.ಎಂ. ನರೇಂದ್ರ ಸ್ವಾಮಿ   

ಬೆಂಗಳೂರು: ಗ್ರಾಮ, ಪ‍ಟ್ಟಣ ಹಾಗೂ ನಗರಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ನದಿಮೂಲಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ತಿಳಿಸಿದರು.

‘ಪ್ರಜಾವಾಣಿ’ ಜತೆಗೆ ಸೋಮವಾರ ಮಾತನಾಡಿದ ಅವರು, ಕಾವೇರಿ, ತುಂಗಭದ್ರಾ ಸೇರಿದಂತೆ ಹಲವು ನದಿಗಳಿಂದ ಕುಡಿಯುವ ನೀರನ್ನು ನಾಗರಿಕರಿಗೆ ಒದಗಿಸಲಾಗುತ್ತಿದೆ. ನದಿಮೂಲಗಳಲ್ಲಿ ಮಾಲಿನ್ಯ ಹೆಚ್ಚಳವಾಗುತ್ತಿದೆ ಎಂಬ ಬಗ್ಗೆ ಹಲವು ವರದಿಗಳಾಗಿವೆ. ಹೀಗಾಗಿ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಲಮೂಲಗಳಲ್ಲಿನ ಮಾಲಿನ್ಯ ತಡೆಯಲು ಆದ್ಯತೆ ನೀಡಲಾಗುತ್ತದೆ ಎಂದರು.

ರಾಜ್ಯದ ಎಲ್ಲ ಭಾಗಗಳಲ್ಲೂ ಅಂತರ್ಜಲ, ನದಿಗಳು ಮಲಿನಗೊಳ್ಳುತ್ತಿವೆ. ಶೇ 50ರಷ್ಟು ಜನರಿಗೆ ಕುಡಿಯು ನೀರು ಪೂರೈಸುವ ಕಾವೇರಿ ನದಿಯಲ್ಲಿ ಮಾಲಿನ್ಯ ಹೆಚ್ಚಾಗಿದೆ. ಇದನ್ನು ತಡೆಯಲು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ನದಿಗಳನ್ನು ಮಾಲಿನ್ಯ ಮುಕ್ತಗೊಳಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ADVERTISEMENT

ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾಗಿ ಸೆಪ್ಟೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಇದರ ಅಂಗವಾಗಿ, ವರ್ಷಪೂರ್ತಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರಾಥಮಿಕ ಶಿಕ್ಷಣದಲ್ಲಿ ಪರಿಸರದ ‍ಪಠ್ಯ ಸೇರಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಮಂಡಳಿಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಮಾಲಿನ್ಯ ನಿಯಂತ್ರಣದಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. 750ಕ್ಕೂ ಹೆಚ್ಚು ಹುದ್ದೆಗಳಲ್ಲಿ 230 ಹುದ್ದೆಗಳಲ್ಲಿ ಮಾತ್ರ ಸಿಬ್ಬಂದಿ ಇದ್ದಾರೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ ನೀಡಿದ್ದು, ಮೀಸಲಾತಿ ಅಂತಿಮಗೊಂಡ ಕೂಡಲೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ಲಾಸ್ಟಿಕ್‌ ಮುಕ್ತ ರಾಜ್ಯವನ್ನಾಗಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಪರಿಸರ ನೀರು ವಾಯು ಸೇರಿದಂತೆ ಎಲ್ಲ ಮಾಲಿನ್ಯಕ್ಕೂ ನಿಯಂತ್ರಣ ಹಾಕಲಾಗುತ್ತದೆ
ಪಿ.ಎಂ. ನರೇಂದ್ರಸ್ವಾಮಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

ಎಸ್‌ಟಿಪಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಡ್ಡಾಯ

ರಾಜ್ಯದಲ್ಲಿರುವ ಎಲ್ಲ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳಲ್ಲಿ (ಎಸ್‌ಟಿಪಿ) ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಪಿ.ಎಂ. ನರೇಂದ್ರ ಸ್ವಾಮಿ ತಿಳಿಸಿದರು. ಎಸ್‌ಟಿಪಿಯಿಂದ ಸಂಸ್ಕರಣೆಯಾಗಿ ಹೊರಹರಿಯುವ ನೀರಿನ ಬಗ್ಗೆಯೂ ಹಲವು ರೀತಿಯ ಸಂಶಯಗಳಿವೆ. ಕೆಲವು ಎಸ್‌ಟಿಪಿಗಳು ಕಾರ್ಯ ನಿರ್ವಹಿಸುವುದೇ ಇಲ್ಲ ಎಂಬ ಆರೋಪವೂ ಇದೆ. ಹೀಗಾಗಿ ಎಸ್‌ಟಿಪಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಸೆನ್ಸರ್‌ಗಳನ್ನು ಅಳವಡಿಸಿ ಸಂಸ್ಕರಿತ ನೀರಿನ ಗುಣಮಟ್ಟವನ್ನೂ ಅಳೆಯಯಾಗುವುದು. ಸಿ.ಸಿ.ಟಿ.ವಿ ಕ್ಯಾಮೆರಾಗಳ ನೇರಪ್ರಸಾರ ಹಾಗೂ ಸೆನ್ಸರ್‌ಗಳ ಮಾಹಿತಿ ಆನ್‌ಲೈನ್ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ರವಾನೆಯಾಗುವಂತೆ ನಿಯಮ ರೂಪಿಸಲಾಗುತ್ತದೆ ಎಂದರು. ಬೆಂಗಳೂರಿನ ಕೆರೆಗಳಿಗೆ ನೀರು ಹರಿಯುವ ಮುನ್ನ ಸಂಸ್ಕರಣೆಯಾಗಬೇಕು. ಇದಕ್ಕಾಗಿ ಎಲ್ಲೆಡೆ ಎಸ್‌ಟಿ‍ಪಿಗಳನ್ನು ಸ್ಥಾಪಿಸಬೇಕು. ಈ ಬಗ್ಗೆಯೂ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಪರಿಸರ ದಿನಾಚರಣೆ

ಮಾಲಿನ್ಯ ಮಂಡಳಿ ವತಿಯಿಂದ ಜೂನ್‌ 5ರಂದು ನಡೆಯಬೇಕಿದ್ದ ಪರಿಸರ ದಿನಾಚರಣೆಯನ್ನು ಜೂನ್‌ 17ರಂದು ಆಯೋಜಿಸಲಾಗಿದೆ. ಜೂನ್ 17ರಂದು ಬೆಳಗ್ಗೆ 8 ಗಂಟೆಗೆ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮುಂಭಾಗದಲ್ಲಿ ‘ಪರಿಸರ ನಡಿಗೆ’ ಏರ್ಪಡಿಸಲಾಗಿದೆ. ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ಮತ್ತು ಎನ್‌ಸಿಸಿ ಕೆಡೆಟ್ಸ್ ಸೇರಿದಂತೆ ಸುಮಾರು 3000 ಜನರು ಭಾಗವಹಿಸುತ್ತಾರೆ. ಅರಮನೆ ಮೈದಾನದಲ್ಲಿ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ ಎಂದು ನರೇಂದ್ರ ಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.