ದಾವಣಗೆರೆ: ‘500ಕ್ಕೂ ಹೆಚ್ಚು ಜನಸಂಖ್ಯೆಯುಳ್ಳ, ಸಂಪರ್ಕರಹಿತ ವಸತಿ ಪ್ರದೇಶಗಳಲ್ಲಷ್ಟೇ ರಸ್ತೆ ನಿರ್ಮಿಸಬಹುದು’ ಎಂಬ ಮಾರ್ಗಸೂಚಿಯಿಂದಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯು (ಪಿಎಂಜಿಎಸ್‌ವೈ) 4ನೇ ಹಂತದಲ್ಲಿ ರಾಜ್ಯದ 15 ಜಿಲ್ಲೆಗಳ ಕೈತಪ್ಪುವ ಸಾಧ್ಯತೆ ಇದೆ.
ಪಿಎಂಜಿಎಸ್‌ವೈ 4ನೇ ಹಂತವನ್ನು 2024ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದು, 25,000 ಜನವಸತಿ ಪ್ರದೇಶಗಳಿಗೆ ಸರ್ವಋತು ಸಂಪರ್ಕ ರಸ್ತೆ ಕಲ್ಪಿಸುವ ಆಶ್ವಾಸನೆ ನೀಡಿತ್ತು. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 16 ಜಿಲ್ಲೆಗಳ 225 ಜನವಸತಿ ಪ್ರದೇಶಗಳು ಮಾತ್ರವೇ ಯೋಜನೆಗೆ ಅರ್ಹತೆ ಪಡೆದಿವೆ.
ಕೆಲವು ಜಿಲ್ಲೆಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಕಾಯುತ್ತಿರುವ ಬಹುತೇಕ ಗ್ರಾಮಗಳ ಜನಸಂಖ್ಯೆ 500ಕ್ಕಿಂತ ಕಡಿಮೆ ಇರುವುದರಿಂದ ಹಾಗೂ ಈಗಾಗಲೇ ಆಯಾ ಗ್ರಾಮ ವ್ಯಾಪ್ತಿಯಲ್ಲಿ ಕೆಲವೊಂದು ರಸ್ತೆಗಳು ಅಭಿವೃದ್ಧಿ ಹೊಂದಿರುವುದರಿಂದ ಯೋಜನೆಯಿಂದ ವಂಚಿತವಾಗುತ್ತಿವೆ.
ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು 2000–2001ನೇ ಸಾಲಿನಲ್ಲಿ ಯೋಜನೆ ಜಾರಿಗೊಳಿಸಲಾಯಿತು. ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಇದು ಯಶಸ್ಸು ಕಂಡಿದೆ. 2013ರಲ್ಲಿ 2ನೇ ಹಂತ, 2019ರಲ್ಲಿ 3ನೇ ಹಂತ ಜಾರಿಗೊಳಿಸಲಾಗಿತ್ತು.
4ನೇ ಹಂತವು 2024ರ ಡಿಸೆಂಬರ್‌ನಲ್ಲಿ ಅನುಷ್ಠಾನಕ್ಕೆ ಬಂದಿದೆ. ಐದು ವರ್ಷಗಳಲ್ಲಿ ₹ 70,125 ಕೋಟಿ ಅಂದಾಜು ವೆಚ್ಚದಲ್ಲಿ 62,500 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.
ರಾಜ್ಯದಲ್ಲಿ ಸಂಪರ್ಕರಹಿತ ಜನವಸತಿ ಪ್ರದೇಶಗಳ ಸಂಖ್ಯೆ ವಿರಳ. ‘ನಮ್ಮ ಗ್ರಾಮ ನಮ್ಮ ರಸ್ತೆ’ ಸೇರಿದಂತೆ ಹಲವು ಯೋಜನೆಯಡಿ ಬಹುತೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಹೊಸದಾಗಿ ನಿರ್ಮಾಣವಾಗಿರುವ ಜನವಸತಿ ಪ್ರದೇಶಗಳು 500ಕ್ಕೂ ಕಡಿಮೆ ಜನಸಂಖ್ಯೆ ಹೊಂದಿವೆ. ಪಿಎಂಜಿಎಸ್‌ವೈ 4ನೇ ಹಂತದ ಮಾರ್ಗಸೂಚಿ ಪ್ರಕಾರ ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂಬುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಯೊಬ್ಬರ ಹೇಳಿಕೆ.
ಯೋಜನೆಗೆ ಕೇಂದ್ರ ಮತ್ತು ರಾಜ್ಯ 60:40ರ ಅನುಪಾತದಲ್ಲಿ ವೆಚ್ಚ ಭರಿಸಿವೆ. 2022–23ರಿಂದ 2024–2025ನೇ ಸಾಲಿನವರೆಗೆ ರಾಜ್ಯದಲ್ಲಿ 2,254 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ₹ 837 ಕೋಟಿ, ರಾಜ್ಯ ಸರ್ಕಾರ ₹ 585 ಕೋಟಿ ವ್ಯಯಿಸಿವೆ.
‘ಗ್ರಾಮದಲ್ಲಿ ಒಂದು ರಸ್ತೆ ಅಭಿವೃದ್ಧಿಪಡಿಸಿದ್ದರೆ ಮತ್ತೊಂದು ರಸ್ತೆ ನಿರ್ಮಿಸಲು ಯೋಜನೆಯ 4ನೇ ಹಂತದಲ್ಲಿ ಅವಕಾಶವಿಲ್ಲ. ರಸ್ತೆ ದುರಸ್ತಿಗೂ ಅವಕಾಶವಿಲ್ಲ. ಇದರಿಂದ ರಾಜ್ಯವು ಯೋಜನೆಯ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ. ಮಾರ್ಗಸೂಚಿಗೆ ತಿದ್ದುಪಡಿ ತಂದರೆ ಮಾತ್ರ ರಾಜ್ಯಕ್ಕೆ ಅನುಕೂಲ ಆಗಲಿದೆ’ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಪಿಎಂಜಿಎಸ್‌ವೈ’ 4ನೇ ಹಂತದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ರಸ್ತೆಯ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಜನಸಂಖ್ಯೆಯ ಮಾನದಂಡವನ್ನು 200ಕ್ಕೆ ಇಳಿಸಿದರೆ ಅನುಕೂಲಗಿತ್ತೆ ಮಾಧವ ವಿಠ್ಠಲರಾವ್ ಸಿಇಒ ಜಿಲ್ಲಾ ಪಂಚಾಯಿತಿ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.