ಬಿಎಸ್‌ವೈ
ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧದ ದೂರನ್ನು ರದ್ದುಗೊಳಿಸಬೇಕು ಎಂದು ಕೋರಲಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇದೇ10ಕ್ಕೆ ಮುಂದೂಡಿದೆ.
‘ನನ್ನ ವಿರುದ್ಧ ದಾಖಲಾಗಿರುವ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ರಿಟ್ ಅರ್ಜಿಯನ್ನು, ‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ (ಧಾರವಾಡ) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮಂಗಳವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಯಡಿಯೂರಪ್ಪ ಪರ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಸತ್ಯವನ್ನು ಬಯಲು ಮಾಡಲಿಕ್ಕಾಗಿ ತನಿಖೆ ನಡೆಸಲಾಗುತ್ತದೆ. ಆದರೆ, ತನಿಖೆ ಪಕ್ಷಪಾತಿಯಾಗಿರಬಾರದು. ನ್ಯಾಯಯುತವಾಗಿರಬೇಕು ಮತ್ತು ಕಾನೂನಿನ ಅನ್ವಯ ನಡೆಯಬೇಕು’ ಎಂದರು.
‘ದೂರಿಗೆ ಸಂಬಂಧಿಸಿದಂತೆ ಸಂಜ್ಞೇಯ ಅಪರಾಧ ಪರಿಗಣಿಸುವ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯವು ತನಿಖಾಧಿಕಾರಿಯ ಅಭಿಪ್ರಾಯವನ್ನು ಒಪ್ಪಲಾಗದು. ದೂರು ದಾಖಲಿಸುವುದಕ್ಕೂ ಮುನ್ನ ದೂರುದಾರೆ (ಸಂತ್ರಸ್ತೆಯ ತಾಯಿ; ಈಗ ಸಾವನ್ನಪ್ಪಿದ್ದಾರೆ) ಮತ್ತು ಸಂತ್ರಸ್ತೆಯು ಹಲವು ಬಾರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ’ ಎಂಬುದನ್ನು ಪುನರುಚ್ಚರಿಸಿದರು.
ಒಂದು ಹಂತದಲ್ಲಿ ನ್ಯಾಯಪೀಠವು ನಾಗೇಶ್ ಅವರಿಗೆ, ‘ನೀವು ಉಲ್ಲೇಖಿಸುತ್ತಿರುವ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಬೇಕು ಎಂದಾದರೆ ಸಂತ್ರಸ್ತೆಯ ಹೇಳಿಕೆಯನ್ನೂ ಪರಿಗಣಿಸಬೇಕಾಗುತ್ತದೆ. ಇಡೀ ಘಟನೆಯನ್ನು ಸಂತ್ರಸ್ತೆ ವಿವರಿಸಿದ್ದಾರೆ. ಆಗ ಇದು ಹೇಳಿಕೆ ವರ್ಸಸ್ ಹೇಳಿಕೆ ಎಂತಾಗುವುದಿಲ್ಲವೇ’ ಎಂದು ಪ್ರಶ್ನಿಸಿತು. ಇದಕ್ಕೆ ನಾಗೇಶ್ ವಾದ ಮಂಡನೆಗೆ ಮತ್ತಷ್ಟು ಸಮಯಾವಕಾಶ ಕೋರಿದ ಕಾರಣ ನ್ಯಾಯಪೀಠ ವಿಚಾರಣೆಯನ್ನು ಇದೇ 10ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.