ADVERTISEMENT

ಪೋಕ್ಸೊ ಕಾಯ್ದೆ: ವಯೋಮಿತಿ ಪರಿಶೀಲನೆಗೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 20:14 IST
Last Updated 7 ನವೆಂಬರ್ 2022, 20:14 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಹದಿನಾರು ವರ್ಷ ದಾಟಿದ ಬಾಲಕಿಯರು ಪ್ರೇಮ ಪ್ರಕರಣಗಳಲ್ಲಿ ಸಿಲುಕಿ ಮನೆಬಿಟ್ಟು ಓಡಿ ಹೋಗುವ ಮತ್ತು ಲೈಂಗಿಕ ಸಂಪರ್ಕ ಹೊಂದುವ ಪ್ರಕರಣಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಬಾಲಕಿಯರ ಲೈಂಗಿಕ ಸಂಪರ್ಕದ ವಯೋಮಿತಿಯ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು ಮತ್ತು ವಾಸ್ತವ ಸಂಗತಿಗಳ ಆಧಾರದಲ್ಲಿ ಈ ನಿಟ್ಟಿನಲ್ಲಿ ಮರುಚಿಂತನೆ ನಡೆಸಬೇಕು’ ಎಂದು ಹೈಕೋರ್ಟ್‌, ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶಿಸಿದೆ.

ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಆರೋಪದ ಪ್ರಕರಣವೊಂದರಲ್ಲಿ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಮತ್ತು ಜಿ.ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಮಹತ್ವದ ಆದೇಶ ನೀಡಿದೆ.

‘ಪೋಕ್ಸೊ ಕಾಯ್ದೆ ಅನುಸಾರ ಲೈಂಗಿಕ ಸಂಪರ್ಕಕ್ಕೆ ಹೊಂದಲು ಸಮ್ಮತಿಯ ವಯಸ್ಸು 18 ವರ್ಷ. ಹಾಗಾಗಿ, ವಾಸ್ತವ ನೆಲೆಗಟ್ಟಿನಲ್ಲಿ ಪೋಕ್ಸೊ ಕಾಯ್ದೆ ಅಡಿಯಲ್ಲಿನ ಸಮ್ಮತಿಯ ವಯಸ್ಸಿನ ಮಾನದಂಡದ ಬಗ್ಗೆ ಕಾನೂನು ಆಯೋಗ ಮರುಚಿಂತನೆ ನಡೆಸಬೇಕಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

‘ವಿದ್ಯಾರ್ಥಿಗಳಿಗೆ9ನೇ ತರಗತಿಯಿಂದಲೇ ಭಾರತೀಯ ದಂಡ ಸಂಹಿತೆ–1860 (ಐಪಿಸಿ) ಹಾಗೂ ಪೋಕ್ಸೊ ಕಾಯ್ದೆ–2012ರ ನಿಯಮಗಳ ಬಗ್ಗೆ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಸೂಕ್ತ ಶಿಕ್ಷಣ ಸಾಮಗ್ರಿ ರೂಪಿಸಲು ರಾಜ್ಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಮಿತಿಯೊಂದನ್ನು ರಚಿಸಬೇಕು. ಐಪಿಸಿ ಮತ್ತು ಪೋಕ್ಸೊ ಕಾಯ್ದೆ ನಿಯಮ ಉಲ್ಲಂಘನೆ ಮಾಡುವುದರಿಂದ ಎಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಈ ಕುರಿತಂತೆ ಮುನ್ನೆಚ್ಚರಿಕೆ ನೀಡುವಂತೆ ಎಲ್ಲಾ ಶಾಲೆಗಳಿಗೆ ಸೂಚಿಸಬೇಕು. ಸಮಿತಿಯು ಈ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಕರಣವೇನು?:‘ನನ್ನ ಮಗಳನ್ನು ಓಡಿಸಿಕೊಂಡು ಹೋಗಿದ್ದಾನೆ ಮತ್ತು ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಾನೆ’ ಎಂಬ ತಾಯಿಯ ಆರೋಪದ ಮೇರೆಗೆ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.ಪ್ರಕರಣ ವಿಚಾರಣಾ ಹಂತದಲ್ಲಿರುವಾಗಲೇ ಆರೋಪಿ ಮತ್ತು ಸಂತ್ರಸ್ತೆ ಮದುವೆಯಾಗಿದ್ದರು. ‘ಎರಡು ಮಕ್ಕಳನ್ನು ಪಡೆದು ಸುಖಜೀವನ ನಡೆಸುತ್ತಿರುವ ನಮಗೀಗ ಪ್ರಕರಣ ಮುಂದುವರಿಸುವ ಬಯಕೆ ಇಲ್ಲ’ ಎಂದು ಸಂತ್ರಸ್ತೆ ಮತ್ತು ಆರೋಪಿ ನ್ಯಾಯಾಲಯಕ್ಕೆ ಜಂಟಿ ಮೊಮೊ (ಜ್ಞಾಪನಾ ಪತ್ರ) ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಈ ಆದೇಶ ರದ್ದು ಕೋರಿ ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.