ಬೆಂಗಳೂರು: ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸು ತ್ತಿರುವ ಯುವಕನನ್ನು ಸ್ವಇಚ್ಛೆಯಿಂದ ಮದುವೆಯಾಗಿದ್ದೇನೆ’ ಎಂಬ ಸಂತ್ರಸ್ತ ವಯಸ್ಕ ತರುಣಿಯ ಹೇಳಿಕೆಯನ್ನು ಪರಿಗಣಿಸಿರುವ ಹೈಕೋರ್ಟ್ ಈ ಕುರಿತ ಪ್ರಕರಣದಲ್ಲಿ ಯುವಕನ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡಿದೆ.
ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲ ಮಂದಿರದಲ್ಲಿ ಸಕ್ಷಮ ಪ್ರಾಧಿಕಾರದ ವಶದಲ್ಲಿದ್ದ ಯುವತಿ ಮತ್ತು ಆಕೆಯ ಚಿಕ್ಕಪ್ಪನನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರ ಚೇಂಬರ್‌ನಲ್ಲಿ ಖುದ್ದು ಹಾಜರುಪಡಿಸಿದ ವೇಳೆ ಯುವತಿ ಈ ಕುರಿತಂತೆ ನೀಡಿದ ಗೋಪ್ಯ ಹೇಳಿಕೆ ಮತ್ತು ದಾಖಲೆಯನ್ನು ನ್ಯಾಯಮೂರ್ತಿಗಳು ಪರಿಗಣಿಸಿದ್ದಾರೆ.
ವಿಚಾರಣೆ ವೇಳೆ ಸಂತ್ರಸ್ತ ಯುವತಿ, ‘ನಾನೀಗ ವಯಸ್ಕಳಾಗಿದ್ದೇನೆ. ಆರೋಪಿ ಯುವಕನ ಜೊತೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದೇನೆ. ಬಿ.ಕಾಂ ಪದವಿಯ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದೇನೆ’ ಎಂಬ ಪ್ರಮುಖ ಅಂಶವನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ‘ಯುವತಿಯನ್ನು ತಕ್ಷಣವೇ ಬಾಲ ಮಂದಿರದಿಂದ ಬಿಡುಗಡೆ ಮಾಡಬೇಕು. ಆಕೆ ಇಚ್ಛಿಸಿದ ಹಾಸ್ಟೆಲ್‌ನಲ್ಲಿ ಉಳಿಯಲು ಅವಕಾಶ ಕಲ್ಪಿಸಬೇಕು’ ಎಂದು ಆದೇಶಿಸಿದ್ದಾರೆ.
‘ಅರ್ಜಿದಾರ ಯುವಕ ಮತ್ತು ಸಂತ್ರಸ್ತೆ ವಿಚಾರಣಾ ನ್ಯಾಯಾಲಯದಲ್ಲಿ ಒಟ್ಟಾಗಿ ಭಾಗಿಯಾಗಬೇಕು ಎಂಬ ಷರತ್ತಿಗೆ ಒಳಪಟ್ಟು ಸಂತ್ರಸ್ತೆಯು ಯುವಕನ ಜೊತೆ ಹೊರಡಲು ಪೊಲೀಸರು ವ್ಯವಸ್ಥೆ ಮಾಡಬೇಕು. ಸಂತ್ರಸ್ತೆಯ ಚಿಕ್ಕಪ್ಪ ತಮ್ಮ ವಕೀಲರು ಮತ್ತು ಪೊಲೀಸರ ಸಮ್ಮುಖದಲ್ಲಿ ಸಂತ್ರಸ್ತೆಯನ್ನು ಭೇಟಿ ಮಾಡಬಹುದು’ ಎಂದು ಆದೇಶಿಸಿದ ನ್ಯಾಯಮೂರ್ತಿಗಳು, ಯುವಕ ಮತ್ತು ಯುವತಿಯನ್ನು ಸೆಪ್ಟೆಂಬರ್ 3ರಂದು ನಡೆಯುವ ವಿಚಾರಣೆಗೆ ಖುದ್ದು ಹಾಜರಾಗಲು ನಿರ್ದೇಶಿಸಿ ವಿಚಾರಣೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.