ADVERTISEMENT

ಪೊಕ್ಸೊ: ಪೊಲೀಸ್‌ ಅಧಿಕಾರಿ ಖುಲಾಸೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 19:17 IST
Last Updated 2 ಅಕ್ಟೋಬರ್ 2023, 19:17 IST
<div class="paragraphs"><p>‘ಪೊಕ್ಸೊ’</p></div>

‘ಪೊಕ್ಸೊ’

   

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಇಬ್ಬರು ಮಲಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸು ತ್ತಿದ್ದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಟಿ.ಆರ್.ಶ್ರೀನಿವಾಸ್ ಅವರನ್ನು ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.

ಈ ಸಂಬಂಧ ಶ್ರೀನಿವಾಸ್‌ (39) ಅವರ ಎರಡನೇ ಹೆಂಡತಿ (34) ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ತ್ವರಿತಗತಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ
ಎ.ಜಿ.ಗಂಗಾಧರ ಅವರು, ‘ಪಂಚನಾಮೆಯ ಸಾಕ್ಷ್ಯಗಳು ಆರೋಪವನ್ನು ದೃಢಪಡಿಸಿಲ್ಲ‘ ಎಂಬ ಕಾರಣದಿಂದ ಪ್ರಕರಣವನ್ನು ವಜಾ
ಗೊಳಿಸಿದ್ದಾರೆ.

ADVERTISEMENT

ಪ್ರಕರಣವೇನು?: ಶ್ರೀನಿವಾಸ್‌ ತಮ್ಮ ಮೊದಲ ಹೆಂಡತಿಯಿಂದ ವಿಚ್ಛೇದನ ಪಡೆದ ನಂತರ ಎರಡನೇ ಮದುವೆ ಯಾಗಿದ್ದರು. ಎರಡನೇ ಹೆಂಡತಿ ಮುಸ್ಲಿಂ ಧರ್ಮಕ್ಕೆ ಸೇರಿದ್ದು ಅವರೂ ತಮ್ಮ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು. ಈಕೆಗೆ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದು, ದಂಪತಿ 2012ರಿಂದ ಜೆ.ಸಿ.ನಗರದ ಮುದ್ದಣ್ಣ ಗಾರ್ಡನ್‌ ಪ್ರದೇಶದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು.

ದಾಂಪತ್ಯದಲ್ಲಿ ತಲೆದೋರಿದ ಕ್ಲುಲ್ಲಕ ಕಾರಣಗಳ ಪರಿಣಾಮ ಶ್ರೀನಿವಾಸ್‌ ಅವರ ಎರಡನೇ ಪತ್ನಿ ಠಾಣೆಗೆ ದೂರೊಂದನ್ನು ಸಲ್ಲಿಸಿದ್ದರು. ‘ನನ್ನ ಇಬ್ಬರೂ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ‘ ಎಂದು ಆರೋಪಿಸಿ ಇಂಗ್ಲಿಷ್‌ನಲ್ಲಿ ಬರೆದ ಲಿಖಿತ ದೂರೊಂದನ್ನು ಅಂಚೆ ಕಚೇರಿ ಮೂಲಕ ಸಕ್ಷಮ ಪ್ರಾಧಿಕಾರಗಳಿಗೆ ರವಾನಿಸಿದ್ದರು.

ಇದರನ್ವಯ ಪೊಲೀಸರು ಶ್ರೀನಿವಾಸ್‌ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ಶ್ರೀನಿವಾಸ್‌ ಅವರನ್ನು 2022ರ ಜುಲೈ 1ರಂದು ಬಂಧಿಸಿದ್ದರು. ದೂರನ್ನು ಅಲ್ಲಗಳೆದಿದ್ದ ಶ್ರೀನಿವಾಸ್‌, ’ಈ ದೂರು ಸಲ್ಲಿಸಲು ನನ್ನ ಸಹೋದ್ಯೋಗಿಯಾದ ಮಹಿಳಾ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌, ಯಾಸ್ಮಿನ್‌ ತಾಜ್‌ ಕುಮ್ಮಕ್ಕು ನೀಡಿದ್ದಾರೆ‘ ಎಂದು ಪ್ರತಿ ಆರೋಪ ಮಾಡಿದ್ದರು. ಅಂತೆಯೇ, 2022ರ ಡಿಸೆಂಬರ್‌ನಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು.

ವಿಚಾರಣೆ ವೇಳೆ ಫಿರ್ಯಾದುದಾರಳೂ ಆದ ಎರಡನೇ ಹೆಂಡತಿ ಹಾಗೂ ಅವರ ಸಂತ್ರಸ್ತ ಪುತ್ರಿಯರಲ್ಲಿ ಒಬ್ಬಾಕೆ ಕೋರ್ಟ್‌ಗೆ ಹಾಜರಾಗಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973 (ಸಿಆರ್‌ಪಿಸಿ) ಕಲಂ 161 ಮತ್ತು 164ರ ಅನುಸಾರ ಹೇಳಿಕೆ ನೀಡಿದ್ದರು. ತಮ್ಮ ವಿರುದ್ಧದ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಮತ್ತೊಬ್ಬ ಸಂತ್ರಸ್ತ ಬಾಲಕಿ ಗೈರಾಗಿದ್ದರು.

ಶ್ರೀನಿವಾಸ್‌ ಪರ ಹೈಕೋರ್ಟ್‌ ವಕೀಲ ಎಸ್‌.ಸುನಿಲ್‌ ಕುಮಾರ್‌, ‘ಈ ದೂರು ದುರುದ್ದೇಶದಿಂದ ಕೂಡಿದೆ. ಸಂತ್ರಸ್ತ ಬಾಲಕಿಯರ ವೈದ್ಯಕೀಯ ವರದಿಗಳು ಆರೋಪವನ್ನು ದೃಢೀಕರಿಸುವುದಿಲ್ಲ. ಹಾಗಾಗಿ ಹುರುಳಿಲ್ಲದ ಈ ಆರೋಪದಿಂದ ಶ್ರೀನಿವಾಸ್‌ ಅವರನ್ನು ದೋಷಮುಕ್ತಗೊಳಿಸಬೇಕು‘ ಎಂದು ಕೋರಿ ವಾದ ಮಂಡಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಧೀಶರು ಒಟ್ಟು 22 ಸಾಕ್ಷಿಗಳ ವಿಚಾರಣೆ ನಡೆಸುವ ಮೂಲಕ ಶ್ರೀನಿವಾಸ್ ಅವರನ್ನು ಪೋಕ್ಸೊ ಪ್ರಕರಣದಿಂದ ಖುಲಾಸೆಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.