ADVERTISEMENT

ಕವಿತೆ ಕಿಟಕಿಯಾಗಿಸಿಕೊಂಡ‘ ಕವಿ ರಮೇಶ’ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 4:20 IST
Last Updated 13 ಏಪ್ರಿಲ್ 2019, 4:20 IST
ರಮೇಶ ಹೆಗಡೆ
ರಮೇಶ ಹೆಗಡೆ   

ಶಿರಸಿ: ‌ಜಗುಲಿಯಿಂದಲೇ ಕಿಟಕಿಯಾಚೆಗಿನ ಜಗತ್ತನ್ನು ನೋಡುತ್ತ ಆ ಖುಷಿಯನ್ನು ಕಾವ್ಯದ ಮೂಲಕ ಹಲವಾರು ಜನರಿಗೆ ಹಂಚಿ, ಸಂಭ್ರಮಿಸುತ್ತಿದ್ದ ಕವಿ ರಮೇಶ ಹೆಗಡೆ (40) ಶನಿವಾರ ಬೆಳಿಗ್ಗೆ ನಿಧನರಾದರು. ಅವರಿಗೆ ಅಪ್ಪ–ಅಮ್ಮ, ಸಹೋದರ, ಇಬ್ಬರು ಸಹೋದರಿಯರು ಇದ್ದಾರೆ.

ಚಿಕ್ಕಂದಿನಿಂದ ಆಸ್ಟಿಯೋ ಜೆನಿಸಿಸ್ ಇಂಪರ್ಫೆಕ್ಟಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ರಮೇಶ ಅವರಿಗೆ, ಹಾಸಿಗೆ, ಅದರ ಸುತ್ತ ಹರಡಿರುವ ಪುಸ್ತಕ, ಮೊಬೈಲ್ ಇವಿಷ್ಟೇ ನಿತ್ಯವೂ ಕಣ್ಣಿಗೆಟಕುತ್ತಿದ್ದ ವಸ್ತುಗಳು. ಆದರೆ, ಅವರ ಒಳಗಣ್ಣು ಪ್ರಪಂಚವನ್ನೇ ಗ್ರಹಿಸಿ, ಅದನ್ನು ಅಕ್ಷರ ರೂಪಕ್ಕೆ ಇಳಿಸುತ್ತಿತ್ತು.ಸದಾ ಮಲಗಿರುವ ಅವರಿಗೆ ಸ್ವತಂತ್ರವಾಗಿ ಎದ್ದು ಕುಳಿತುಕೊಳ್ಳಲು ಸಹ ಇನ್ನೊಬ್ಬರನ್ನು ಅವಲಂಬಿಸಬೇಕಾದ ಸ್ಥಿತಿಯಿತ್ತು. ಓದು, ಬರಹದಲ್ಲಿ ನೋವನ್ನು ಮರೆತ ಅವರು, ಸಾಧನೆ ಮಾಡಬೇಕೆಂಬ ಹಂಬಲದಿಂದ ಬಾಹ್ಯ ವಿದ್ಯಾರ್ಥಿಯಾಗಿ, ಮನೆಯಲ್ಲೇ ಪದವಿ ಪರೀಕ್ಷೆ ಬರೆದಿದ್ದರು.

ಅವರು ಅನಾರೋಗ್ಯವನ್ನೇ ಚಿಂತೆಯನ್ನಾಗಿ ಮಾಡಿಕೊಂಡವರಲ್ಲ, ವಾಸ್ತವವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಜೀವಚೈತನ್ಯದ ಚಿಲುಮೆಯಂತಿದ್ದರು. ಮಲಗಿದ್ದಲ್ಲೇ ಕಥೆ, ಕವನ, ಗಝಲ್‌ಗಳನ್ನು ಬರೆಯುತ್ತಿದ್ದರು. ಶಿರಸಿಗೆ ಭೇಟಿ ನೀಡುವ ಸಾಹಿತಿಗಳು, ಸಾಹಿತ್ಯಾಸಕ್ತರಿಗೆ ವಿನಾಯಕ ಕಾಲೊನಿಯಲ್ಲಿರುವ ರಮೇಶ ಹೆಗಡೆ ಅವರ ಮನೆಗೆ ಹೋಗಿ, ಅವರನ್ನು ಮಾತನಾಡಿಸಿಕೊಂಡು ಹೋದರೆ ಅದೇನೋ ಖುಷಿ. ರಮೇಶ ಹೆಗಡೆ ಅವರ ಆರು ಕವನ ಸಂಕಲನಗಳು ಪ್ರಕಟಗೊಂಡಿವೆ. ಅನೇಕ ಪತ್ರಿಕೆಗಳಲ್ಲಿ ಅವರ ಕವನ, ಗಝಲ್‌ಗಳು ಪ್ರಕಟಗೊಂಡಿವೆ.

ADVERTISEMENT

ಎರಡು ವರ್ಷಗಳ ಹಿಂದೆ ಅವರ ಮನೆ ಜಗುಲಿಯಲ್ಲಿ ಸೇರಿದ್ದ ಜನರ ನಡುವೆ ಸಾಹಿತಿ ಜಯಂತ ಕಾಯ್ಕಿಣಿ, ಅವರ ‘ಕಿಟಕಿಯೊಳಗಿನ ಕಣ್ಣು’ ಕವನ ಸಂಕಲನವನ್ನು ಬಿಡುಗಡೆ ಮಾಡಿದ್ದರು.

ಶನಿವಾರ ಬೆಳಿಗ್ಗೆ ರಮೇಶ ಹೆಗಡೆ ಇನ್ನಿಲ್ಲವೆಂಬ ವಿಷಯ ತಿಳಿದಾಗ, ಜಯಂತ ಕಾಯ್ಕಿಣಿ ಪ್ರತಿಕ್ರಿಯಿಸಿದ್ದು ಹೀಗೆ– ‘ದೈಹಿಕ ಅಡೆತಡೆ ಸವಾಲು ಮೀರಿ, ಅದ್ಭುತ ಸ್ಪಂದನಶೀಲವ್ಯಕ್ತಿಯಾಗಿ ಬಾಳಿದ ಅಪರೂಪದ ಮಾದರಿ ರಮೇಶ ಹೆಗಡೆ . ಜಡದ ಮೇಲೆ ಚೇತನದ ಗೆಲುವು ಅವನ ಪ್ರಖರ ಬಾಳು. ಕವಿತೆಗಳನ್ನೇ ಕಿಟಕಿಯಾಗಿಸಿಕೊಂಡು ಯಾವತ್ತೂ ಪಾಸಿಟಿವ್ ಆಗಿ ಉಳಿದ ರಮೇಶನನ್ನು ಮುಕ್ತ ಮನಸ್ಸಿನಿಂದ ಕೃತಜ್ಞತೆಯಿಂದ ಬೀಳ್ಕೊಡೋಣ’.

‘ಎಲ್ಲ ಇದ್ದೂ ಗೋಳಾಡುವವರಿಗೆ, ಸಿನಿಕರಿಗೆ, ಸೋಮಾರಿಗಳಿಗೆ, ಬರವಣಿಗೆಯನ್ನು ಬರಿ ಟೈಪಿಂಗ್ ಅಂದುಕೊಂಡವರಿಗೆ, ಆತ್ಮವ್ಯಾಮೋಹಿಗಳಿಗೆ ಒಂದು ದಿವ್ಯ ಉತ್ತರದಂತೆ ಬೆಳಗಿದ ಬಾಳ್ವೆ ಅವನದು’ ಎಂದು ‘ಪ್ರಜಾವಾಣಿ’ ಜತೆ ಅವರು ಅನಿಸಿಕೆ ಹಂಚಿಕೊಂಡರು.

ಜಿಲ್ಲೆಯಾಗಬೇಕೆಂಬ ಹಂಬಲ:ಘಟ್ಟದ ಮೇಲಿನ ತಾಲ್ಲೂಕುಗಳನ್ನು ಒಳಗೊಂಡು ಶಿರಸಿ ಜಿಲ್ಲೆ ಆಗಬೇಕೆಂದು ಪ್ರತಿಪಾದನೆ ಮಾಡುತ್ತಿದ್ದ ಅವರು, ಅದಕ್ಕಾಗಿಯೇ ವಾಟ್ಸ್‌ಆ್ಯಪ್ ಗ್ರೂಪ್‌ ಅನ್ನು ರಚಿಸಿ, ಈ ವಿಷಯ ಚರ್ಚಿಸುತ್ತಿದ್ದರು. ರಾಜಕೀಯ ಆಗುಹೋಗು, ಸಾಮಾಜಿಕ ಸಂಗತಿಗಳ ಬಗ್ಗೆಯೂ ಚರ್ಚಿಸುತ್ತಿದ್ದ ‘ಕವಿ ರಮೇಶ’ ಇನ್ನಿಲ್ಲವೆಂಬುದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ.

ಒಂದು ತಿಂಗಳ ಹಿಂದೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ನ್ಯಮೋನಿಯಾ ಆಗಿ ಟಿಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.