ADVERTISEMENT

ಮಂಗಳೂರು ಗಲಭೆ: ಆರೋಪಿಗಳ ಪತ್ತೆಗೆ ತಂತ್ರಜ್ಞಾನ ಬಳಕೆ

ಪೊಲೀಸರಿಂದ ತನಿಖೆ ಚುರುಕು– ಮಹತ್ವದ ಮಾಹಿತಿ ಲಭ್ಯ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 20:30 IST
Last Updated 26 ಡಿಸೆಂಬರ್ 2019, 20:30 IST
   

ಮಂಗಳೂರು: ನಗರದಲ್ಲಿ ಇದೇ 19 ರಂದು ನಡೆದ ಗಲಭೆಯ ಕುರಿತು ಪೊಲೀಸ್ ತನಿಖೆ ಚುರುಕುಗೊಂಡಿದೆ. ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 24 ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ಪಡೆದಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದು ಖಚಿತ ಮೂಲಗಳು ತಿಳಿಸಿವೆ.

ಪೊಲೀಸ್ ಲಾಠಿ ಪ್ರಹಾರದ ಸಂದರ್ಭದಲ್ಲಿ ಬಂಧಿತರಾಗಿರುವವರು ಹಾಗೂ ನಂತರ ವಶಕ್ಕೆ ಪಡೆದಿರುವ ಜನರನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಗಲಭೆಯ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳು, ಲಭ್ಯವಾಗಿರುವ ವಿಡಿಯೋ ದೃಶ್ಯಾವಳಿಗಳನ್ನು ಬಳಸಿಕೊಂಡು, ತಂತ್ರಜ್ಞರ ಸಹಾಯದಿಂದ ಮತ್ತಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಅದರ ಆಧಾರದಲ್ಲಿಯೇ ಪೊಲೀಸ್‌ ಇಲಾಖೆಯಿಂದ ವಿಡಿಯೊ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಈಗಾಗಲೇ ಅನೇಕ ವಿಷಯಗಳ ಕುರಿತು ಬಂಧಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಬಂಧಿತರ ಮೊಬೈಲ್‌ಗಳಿಂದ ಹೊರ ಹೋಗಿರುವ ಕರೆಗಳು, ಅವುಗಳಲ್ಲಿರುವ ಸಂದೇಶಗಳ ವಿವರಗಳನ್ನು ಪೊಲೀಸರು ಪಡೆದಿದ್ದು, ಸಂಭಾಷಣೆಯ ವಿವರಗಳನ್ನು ಕಲೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಗುರುವಾರ ಪ್ರತಿಭಟನೆ, ಗಲಭೆ, ಕಲ್ಲು ತೂರಾಟ ನಡೆದಿದ್ದು, ಅದಕ್ಕೆ ಪೂರ್ವಭಾವಿಯಾಗಿ ಬಂದರು ಪ್ರದೇಶದಲ್ಲಿ ಸಭೆಯೊಂದನ್ನು ನಡೆಸಲಾಗಿತ್ತು ಎನ್ನುವ ಮಾಹಿತಿ ಇದೀಗ ಪೊಲೀಸರಿಗೆ ಲಭ್ಯವಾಗಿದೆ.ಅಲ್ಲದೇ ಈ ಸಭೆಯಲ್ಲಿ ಯಾವ ವಿಷಯಗಳನ್ನು ಚರ್ಚಿಸಲಾಗಿತ್ತು ಎನ್ನುವುದನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.