ADVERTISEMENT

ಠಾಣೆಗಳು ವ್ಯಾಪಾರ ಕೇಂದ್ರ: ಪೊಲೀಸರ ಕಾರ್ಯ ವೈಖರಿಗೆ ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 15 ಮೇ 2024, 16:10 IST
Last Updated 15 ಮೇ 2024, 16:10 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಪ್ರಕರಣವಾಗಿ ಮಾರ್ಪಡಿಸಲು ಹೇಗೆ ಸಾಧ್ಯ? ಠಾಣೆಯಲ್ಲಿ ಸಿವಿಲ್ ವ್ಯಾಜ್ಯ ತೀರ್ಮಾನಿಸಲು ಪೊಲೀಸರಿಗೆ ಅಧಿಕಾರ ನೀಡಿದವರು ಯಾರು? ಪೊಲೀಸ್ ಠಾಣೆಗಳನ್ನು ವ್ಯಾಪಾರ ಕೇಂದ್ರ ಮಾಡಿಕೊಳ್ಳಲಾಗಿದೆಯೇ? ಠಾಣೆಯಲ್ಲಿ ಕೂತು ವಸೂಲಿ ಮಾಡುವುದೇ ಪೊಲೀಸರ ಕೆಲಸವೇ... ಎಂದು ಹೈಕೋರ್ಟ್‌ ಮೌಖಿಕವಾಗಿ ಕಿಡಿ ಕಾರಿದೆ.

ನಿವೇಶನವೊಂದರ ಖರೀದಿಗೆ ಸಂಬಂಧಿಸಿದ ವಿಚಾರದಲ್ಲಿ ಮಾರಾಟದಾರರಿಗೆ ಹಣ ಪಾವತಿಸಲು ಖರೀದಿದಾರರಿಗೆ ಒತ್ತಾಯಿಸಿದ ಹಾಗೂ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌, ಚಂದ್ರಾ ಲೇಔಟ್ ಠಾಣೆಯ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪೊಲೀಸ್‌ ಠಾಣೆಯಲ್ಲಿ ಸಿವಿಲ್‌ ವ್ಯಾಜ್ಯ ಇತ್ಯರ್ಥಪಡಿಸುವ ಪೊಲೀಸರ ಕಾರ್ಯವೈಖರಿ ಪುನರಾವರ್ತನೆ ಆಗುತ್ತಿದೆ’ ಎಂದು ಕಟು ಶಬ್ದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ, ‘ಠಾಣೆಗಳನ್ನು ವ್ಯಾಪಾರ ಕೇಂದ್ರಗಳಾಗಿ ಮಾರ್ಪಡಿಸಲಾಗಿದೆ’ ಎಂದು ನ್ಯಾಯಪೀಠ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

ADVERTISEMENT

‘ಪೊಲೀಸರು ಸಿವಿಲ್‌ ವ್ಯಾಜ್ಯದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂಬುದಾಗಿ ಹೈಕೋರ್ಟ್‌ನ ಸಾಕಷ್ಟು ಪೀಠಗಳು ಹಲವು ಬಾರಿ ಆದೇಶಿಸಿವೆ. ಆದರೂ, ಪೊಲೀಸರು ಮಾತ್ರ ಸಿವಿಲ್‌ ವ್ಯಾಜ್ಯಗಳಲ್ಲಿ ಮೂಗು ತೂರಿಸುತ್ತಲೇ ಇದ್ದಾರೆ. ಈ ಕ್ರಮ ಒಪ್ಪುವಂತದಲ್ಲ’ ಎಂದು ಹೇಳಿರುವ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಚಂದ್ರಾ ಲೇ ಔಟ್‌ ಠಾಣೆಯ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಹಾಗೂ ಅದಕ್ಕೆ ಸಂಬಂಧಿಸಿದ ಮುಂದಿನ ಎಲ್ಲಾ ನ್ಯಾಯಿಕ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಿದೆ.

‘ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ದೂರುದಾರನ ಜೊತೆಗೆ ಕೈಜೋಡಿಸಿ ಕಳ್ಳಾಟ ಆಡಿರುವುದು ಮೇಲ್ನೋಟಕ್ಕೇ ಕಂಡುಬರುತ್ತಿದೆ. ಈ ಅಧಿಕಾರಿ ವಿರುದ್ಧ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕು. ತನಿಖಾಧಿಕಾರಿ ಕಾನೂನು ದುರ್ಬಳಕೆ ಮಾಡಿರುವ ಬಗ್ಗೆ ಅರ್ಜಿದಾರರು ತಮ್ಮ ಬಳಿಯಿರುವ ಎಲ್ಲಾ ದಾಖಲೆಗಳನ್ನು ಡಿಸಿಪಿಗೆ ಸಲ್ಲಿಸಬಹುದು’ ಎಂದು ನ್ಯಾಯಪೀಠ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.