ADVERTISEMENT

ನಕಲಿ ‘ಪರಿಶೀಲನಾ ಪ್ರಮಾಣ ಪತ್ರ’ ಜಾಲ !

ಮೊಬೈಲ್, ಇ–ಮೇಲ್ ಮೂಲಕ ಸಂಪರ್ಕಿಸಿ ವಂಚನೆ l ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್

ಸಂತೋಷ ಜಿಗಳಿಕೊಪ್ಪ
Published 2 ಏಪ್ರಿಲ್ 2021, 20:01 IST
Last Updated 2 ಏಪ್ರಿಲ್ 2021, 20:01 IST

ಬೆಂಗಳೂರು: ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸಿ ಪೊಲೀಸ್ ನಕಲಿ ‘ಪರಿಶೀಲನಾ ಪ್ರಮಾಣ ಪತ್ರ’ ಮಾರಾಟ ಮಾಡುತ್ತಿರುವ ಜಾಲ ಸಕ್ರಿಯವಾಗಿದ್ದು, ಜಾಲದ ಕೃತ್ಯದಿಂದಾಗಿ ಹಲವು ಉದ್ಯೋಗಾಕಾಂಕ್ಷಿಗಳು ವಂಚನೆಗೀಡಾಗುತ್ತಿದ್ದಾರೆ.

ಜಾಲದ ಬಗ್ಗೆ ನಗರದ ದಕ್ಷಿಣ ವಿಭಾಗ ಸೈಬರ್‌ ಕ್ರೈಂ ಠಾಣೆಯೊಂದಕ್ಕೆ ದೂರು ನೀಡಿರುವ ಉದ್ಯೋಗಾಕಾಂಕ್ಷಿ, ‘ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಹಣ ಪಡೆದಿದ್ದ ಆರೋಪಿ, ಪೊಲೀಸ್ ನಕಲಿ ಪರಿಶೀಲನಾ ಪ್ರಮಾಣ ಪತ್ರ ನೀಡಿ ವಂಚಿಸಿದ್ದಾನೆ’ ಎಂದಿದ್ದಾರೆ. ನಕಲಿ ಪ್ರಮಾಣ ಪತ್ರವನ್ನೂ ದೂರಿನ ಜೊತೆ ಲಗತ್ತಿಸಿದ್ದಾರೆ.

ದೂರಿನಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ADVERTISEMENT

ಕೆಲಸದ ಆಮಿಷವೊಡ್ಡುವ ಜಾಲ: ‘ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿ, ನೌಕರಿ ಡಾಟ್ ಕಾಮ್‌ ಜಾಲತಾಣಲ್ಲಿ ರಿಸ್ಯುಮೆ ಅಪ್‌ಲೋಡ್ ಮಾಡಿದ್ದರು. ಅದರ ಮಾಹಿತಿ ತಿಳಿದುಕೊಂಡಿದ್ದ ಆರೋಪಿ, ಆಕಾಂಕ್ಷಿ ಮೊಬೈಲ್ ನಂಬರ್‌ಗೆ ಕರೆ ಮಾಡಿ ಕೆಲಸ ಕೊಡಿಸುವ ಆಮಿಷವೊಡ್ಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಾಫ್ಟ್‌ವೇರ್ ಕಂಪನಿಯೊಂದರ ನೇಮಕಾತಿ ಆದೇಶ ಕಳುಹಿಸಿದ್ದ ಆರೋಪಿ, ಕೆಲಸಕ್ಕೆ ಸೇರಬೇಕಾದರೆ ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ ಬೇಕೆಂದು ಹೇಳಿದ್ದ. ಹಣ ಕೊಟ್ಟರೆ, ತಾನೇ ಪ್ರಮಾಣ ಪತ್ರ ಮಾಡಿಸಿಕೊಡುವುದಾಗಿಯೂ ನಂಬಿಸಿದ್ದ.’

‘ಆಕಾಂಕ್ಷಿಯಿಂದ ₹ 3,400 ಪಡೆದಿದ್ದ ಆರೋಪಿ, ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರವೊಂದನ್ನು ಕಳುಹಿಸಿದ್ದ. ಅದನ್ನು ಪಡೆದಿದ್ದ ಆಕಾಂಕ್ಷಿಯು ಪರಿಚಯಸ್ಥರಿಗೆ ತೋರಿಸಿದ್ದರು. ಮೇಲ್ನೋಟಕ್ಕೆ ಪ್ರಮಾಣ ಪತ್ರ ನಕಲಿ ಎಂಬುದು ಗೊತ್ತಾಗಿತ್ತು. ಆ ಬಗ್ಗೆ ವಿಚಾರಿಸುವಷ್ಟರಲ್ಲೇ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ’ ಎಂದೂ ಮೂಲಗಳು ಹೇಳಿವೆ.

‘ಕೆಲ ಖಾಸಗಿ ಕಂಪನಿಗಳಲ್ಲಿ ಕೆಲಸ ಪಡೆದುಕೊಳ್ಳಲು ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆರೋಪಿಗಳು, ಕೆಲಸ ಹುಡುಕುತ್ತಿರುವವರನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದಾರೆ. ಪೊಲೀಸ್‌ ಮುದ್ರೆ ಹಾಗೂ ದಾಖಲೆ
ಗಳನ್ನು ನಕಲಿಯಾಗಿ ಸೃಷ್ಟಿಸುತ್ತಿದ್ದಾರೆ. ಆರೋಪಿಗಳು ಹಲವರಿಗೆ ವಂಚಿಸಿರುವ ಮಾಹಿತಿ ಇದೆ. ಯಾರಾದರೂ ವಂಚನೆಗೀಡಾಗಿದ್ದರೆ, ಸಮೀಪದ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಬಹುದು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

'ಎಸಿಪಿ ಹೆಸರಿನಲ್ಲಿ ಸಹಿ'

‘ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಹೆಸರು ಬಳಸಿಕೊಂಡು ನಕಲಿ ಪರಿಶೀಲನಾ ಪ್ರಮಾಣ ಪತ್ರ ಸೃಷ್ಟಿಸಲಾಗಿದೆ. ಪತ್ರ ನೋಡಿ ಅನುಮಾನಗೊಂಡಿದ್ದ ಉದ್ಯೋಗಾಕಾಂಕ್ಷಿ ದೂರು ನೀಡಿದ್ದಾರೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸ್ ಪ್ರಮಾಣ ಪತ್ರದ ಹೆಸರಿನಲ್ಲಿ ವಂಚನೆ ಮಾಡುತ್ತಿರುವುದು ಗಂಭೀರ ಪ್ರಕರಣ. ಫೋಟೊಶಾಪ್‌ ಸಾಫ್ಟ್‌ವೇರ್‌ನಲ್ಲಿ ಪತ್ರ ಸಿದ್ಧಪಡಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಆತ ಸಿಕ್ಕ ಬಳಿಕವೇ ಮತ್ತಷ್ಟು ಮಾಹಿತಿ ಸಿಗಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.