ಪೊಲೀಸ್ (ಸಾಂಧರ್ಭಿಕ ಚಿತ್ರ)
– ಪ್ರಜಾವಾಣಿ ಚಿತ್ರ
ಬೆಂಗಳೂರು: ಪೊಲೀಸ್ ಸಿಬ್ಬಂದಿಗೆ ಮೂರು ಪಾಳಿಯಲ್ಲಿ ಕೆಲಸದ ಸಮಯ ನಿಗದಿ ಪಡಿಸುವ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಗೃಹ ಇಲಾಖೆ ನಿರ್ದೇಶಿಸಿದೆ.
ರಾಷ್ಟ್ರೀಯ ಸಾಮಾಜಿಕ ನ್ಯಾಯದಳದ ರಾಷ್ಟ್ರೀಯ ಅಧ್ಯಕ್ಷ ಆರ್.ಸ್ಕಂದ ಶರತ್ ಅವರು ಕಳೆದ ಡಿ.13ರಂದು ಸಲ್ಲಿಸಿದ ಮನವಿ ಆಧರಿಸಿ, ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಿ.ಶ್ಯಾಮ ಹೊಳ್ಳ ಅವರು ಡಿಜಿ–ಐಜಿಪಿಗೆ ಜುಲೈ 3ರಂದು ಬರೆದ ಪತ್ರದಲ್ಲಿ ನಿರ್ದೇಶಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಸದ್ಯ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಪೊಲೀಸ್ ಸಿಬ್ಬಂದಿ ಪಾತ್ರ ಮುಖ್ಯವಾಗಿರುವ ಕಾರಣ ಅವರ ಕಾರ್ಯವೈಖರಿ, ದಕ್ಷತೆ, ಜನಸ್ನೇಹಿ ಆಗಿರಲೆಂದು ಬಾಡಿವೋರ್ನ್ ಕ್ಯಾಮೆರಾ, ವಾಕಿಟಾಕಿ, ಜಿಪಿಆರ್‌ಎಸ್ ನೀಡಿ ಯಂತ್ರ ಮಾನವರಾಗಿ ಮಾಡಲಾಗಿದೆ. ಆದರೆ, ಪೊಲೀಸರಿಗೆ ಕುಟುಂಬ, ಮನೆ, ಮಕ್ಕಳು, ತಂದೆ–ತಾಯಿ ಇರುವುದು ಮರೆತು ಬೆಳಗ್ಗಿನಿಂದ ರಾತ್ರಿ ವರೆಗೂ ಕೆಲಸ ಮಾಡುತ್ತಿದ್ದಾರೆ. ಹಬ್ಬದ ದಿನಗಳನ್ನೂ ಮರೆತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಗೆ ಆರು ತಿಂಗಳಿಗೊಮ್ಮೆ ಹಾಗೂ ಅವರ ಅವಲಂಬಿತರಿಗೆ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸುವಂತೆ ಹಾಗೂ ಮೂರು ಪಾಳಿಯಲ್ಲಿ ಸಿಬ್ಬಂದಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಆರ್.ಸ್ಕಂದ ಶರತ್ ಅವರು ಪತ್ರದಲ್ಲಿ ಕೋರಿದ್ದಾರೆ.
ಸ್ಕಂದ ಶರತ್ ಅವರ ಮನವಿಗೆ ಸಂಬಂಧಿಸಿದಂತೆ ನಿಯಮಾನುಸಾರ ಪರಿಶೀಲಿಸಿ ಮೂರು ಪಾಳಿಯಲ್ಲಿ ಪೊಲೀಸ್ ಸಿಬ್ಬಂದಿಗೆ ಸಮಯ ನಿಗದಿ ಪಡಿಸುವ ಕುರಿತು ಸ್ಪಷ್ಟ ಅಭಿಪ್ರಾಯದ ಜತೆಗೆ ವರದಿಯನ್ನು ಸಲ್ಲಿಸುವಂತೆ ಜಿ.ಶ್ಯಾಮ ಹೊಳ್ಳ ಅವರು ನಿರ್ದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.