ADVERTISEMENT

ರಾಜಸ್ಥಾನ, ಉತ್ತರ ಪ್ರದೇಶದಿಂದ ಪಿಸ್ತೂಲ್ ಸಾಗಣೆ

ಶಸ್ತ್ರಾಸ್ತ್ರ ಅಕ್ರಮ ಮಾರಾಟ ಜಾಲ ಪತ್ತೆ; ಎಂಟು ಮಂದಿ ಬಂಧಿಸಿದ ಪಶ್ಚಿಮ ವಿಭಾಗದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 16:46 IST
Last Updated 1 ಮಾರ್ಚ್ 2021, 16:46 IST
ಆರೋಪಿಗಳಿಂದ ಜಪ್ತಿ ಮಾಡಲಾದ ನಾಡ ಪಿಸ್ತೂಲ್‌ಗಳನ್ನು ಪೊಲೀಸ್ ಕಮಿಷನರ್ ಕಮಲ್ ಪಂತ್ ವೀಕ್ಷಿಸಿದರು. ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಇದ್ದರು – ಪ್ರಜಾವಾಣಿ ಚಿತ್ರ
ಆರೋಪಿಗಳಿಂದ ಜಪ್ತಿ ಮಾಡಲಾದ ನಾಡ ಪಿಸ್ತೂಲ್‌ಗಳನ್ನು ಪೊಲೀಸ್ ಕಮಿಷನರ್ ಕಮಲ್ ಪಂತ್ ವೀಕ್ಷಿಸಿದರು. ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜಸ್ಥಾನ ಹಾಗೂ ಉತ್ತರ ಪ್ರದೇಶದಿಂದ ನಾಡ ಪಿಸ್ತೂಲ್‌ಗಳನ್ನು ತಂದು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪಶ್ಚಿಮ ವಿಭಾಗದ ಪೊಲೀಸರು ಭೇದಿಸಿದ್ದು, ಜಾಲದಲ್ಲಿದ್ದ ಎಂಟು ಮಂದಿಯನ್ನು ಬಂಧಿಸಿದ್ದಾರೆ.

‘ಆರ್.ಕೆ. ಹೆಗ್ಡೆ ನಗರದ ಕದೀರ್‌ ಖಾನ್ (32), ಫೈಯಾಜುಲ್ಲಾ ಖಾನ್ (31), ಚೆನ್ನೈನ ವಿನಯ್ (29), ಉತ್ತರಪ್ರದೇಶದ ಪರಾಗ್‌ಕುಮಾರ್ (39), ಗುಜರಾತ್‌ನ ಶಹನವಾಜ್ ಅನ್ಸಾರಿ (29), ಮಧ್ಯಪ್ರದೇಶದ ನಾಸೀರ್ ಶೇಖ್ (50), ಸಲ್ಮಾನ್‌ ಖಾನ್ (28) ಹಾಗೂ ಫಕ್ರುದ್ದೀನ್ (37) ಬಂಧಿತರು. ಅವರಿಂದ 13 ನಾಡ ಪಿಸ್ತೂಲ್ ಹಾಗೂ 52 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

‘ಆರೋಪಿಗಳು, ತಮ್ಮದೇ ಗ್ಯಾಂಗ್ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ನಗರ ಹಾಗೂ ಹೊರ ಜಿಲ್ಲೆಗಳಲ್ಲಿ ಇವರು ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ. ಈ ಜಾಲ ಪತ್ತೆ ಮಾಡಿರುವ ಪಶ್ಚಿಮ ವಿಭಾಗದ ಪೊಲೀಸರ ತಂಡಕ್ಕೆ ₹ 75 ಸಾವಿರ ಬಹುಮಾನ ಘೋಷಿಸಲಾಗಿದೆ’ ಎಂದೂ ಅವರು ಹೇಳಿದರು.

ADVERTISEMENT

ವಸತಿ ಗೃಹದಲ್ಲಿ ಸಿಕ್ಕಿಬಿದ್ದ: ‘ಅಕ್ರಮವಾಗಿ ಪಿಸ್ತೂಲ್ ಸಾಗಣೆ ಮಾಡಿಕೊಂಡು ಬಂದಿದ್ದ ಆರೋಪಿ ಕದೀರ್ ಖಾನ್, ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯ ಜಿ.ಪಿ. ಸ್ಟ್ರೀಟ್‌ನಲ್ಲಿರುವ ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದ. ಆತನ ಬಳಿ ಪಿಸ್ತೂಲ್ ಹಾಗೂ ಗುಂಡುಗಳು ಇದ್ದು, ಯಾರಿಗೂ ಮಾರಾಟ ಮಾಡಲು ಬಂದಿರುವುದಾಗಿ ಠಾಣೆಗೆ ಮಾಹಿತಿ ಬಂದಿತ್ತು’ ಎಂದು ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಇನ್‌ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ನೇತೃತ್ವದ ತಂಡ, ವಸತಿಗೃಹಕ್ಕೆ ಹೋಗಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೇ ಜಾಲದ ಕೃತ್ಯಗಳು ಬಯಲಾದವು. ಆತ ನೀಡಿದ್ದ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಸೆರೆಹಿಡಿಯಲಾಯಿತು’ ಎಂದೂ ತಿಳಿಸಿದರು.

ಕೊಲೆ ಪ್ರಕರಣದ ಆರೋಪಿ: ‘ಬಂಧಿತ ಆರೋಪಿ ಫೈಯಾಜುಲ್ಲಾ ಖಾನ್ ವಿರುದ್ಧ ಸಂಪಿಗೆಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಬಾಗಲೂರು ಠಾಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣ ದಾಖಲಾಗಿವೆ’ ಎಂದೂ ಪಾಟೀಲ ಹೇಳಿದರು.

‘ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ ನಾಡ ಪಿಸ್ತೂಲ್ ತಯಾರಿಕೆ ಮಾಡಲಾಗುತ್ತಿದೆ. ಅಲ್ಲಿಯ ನಿವಾಸಿಗಳಾಗಿರುವ ಕೆಲ ಆರೋಪಿಗಳು, ನಗರದಲ್ಲಿರುವ ಆರೋಪಿಗಳಿಗೆ ಪಿಸ್ತೂಲ್ ಸರಬರಾಜು ಮಾಡುತ್ತಿದ್ದರು. ಒಂದು ಪಿಸ್ತೂಲ್‌ಗೆ ₹5 ಸಾವಿರದಿಂದ ₹ 15 ಸಾವಿರವರೆಗೂ ಮಾರಾಟ ಮಾಡುತ್ತಿದ್ದರು.’

‘ಅಪರಾಧ ಹಿನ್ನೆಲೆಯುಳ್ಳ ಕೆಲವರು, ಆರೋಪಿಗಳ ಬಳಿ ಪಿಸ್ತೂಲ್ ಖರೀದಿಸಿ ಅಪರಾಧ ಕೃತ್ಯಗಳಿಗೆ ಬಳಸಿರುವ ಮಾಹಿತಿ ಇದೆ’ ಎಂದೂ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.