ADVERTISEMENT

ಪೊಲೀಸ್ ನೇಮಕಾತಿ ಹೆಸರಿನಲ್ಲಿ ನಕಲಿ ಜಾಲತಾಣ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 8 ಮೇ 2023, 19:32 IST
Last Updated 8 ಮೇ 2023, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪೊಲೀಸ್ ನೇಮಕಾತಿ ವಿಭಾಗದ ಹೆಸರಿನಲ್ಲಿ ನಕಲಿ ಜಾಲತಾಣ ಸೃಷ್ಟಿಸಿ ಅಭ್ಯರ್ಥಿಗಳನ್ನು ವಂಚಿಸಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪೊಲೀಸ್ ಇಲಾಖೆಯಲ್ಲಿ 25 ತಾಂತ್ರಿಕ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸಬಹುದು’ ಎಂಬುದಾಗಿ ಜಾಹೀರಾತು ನೀಡಿದ್ದ ಆರೋಪಿಗಳು, ಅದರ ಜೊತೆ ನಕಲಿ ಜಾಲತಾಣದ ಲಿಂಕ್ ಹರಿಬಿಟ್ಟಿದ್ದರು. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಎಫ್‌ಐಆರ್ ದಾಖಲಿಸಿಕೊಂಡು, ಜಾಲತಾಣ ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹೊರ ದೇಶವೊಂದರ ವಿಳಾಸ ಬಳಸಿ www.ksprecruitment.co.in ನಕಲಿ ಜಾಲತಾಣ ಸೃಷ್ಟಿಸಲಾಗಿತ್ತು. ತಾಂತ್ರಿಕ ಹುದ್ದೆಗಳ ನೇಮಕಾತಿ ಆಯ್ಕೆಯನ್ನು ನಮೂದಿಸಲಾಗಿತ್ತು. ಲಿಂಕ್ ತೆರೆಯುವ ಅಭ್ಯರ್ಥಿಗಳು, ಅರ್ಜಿ ಭರ್ತಿ ಮಾಡಿದ್ದರು. ಜೊತೆಗೆ, ಪ್ರತಿ ಅರ್ಜಿಗೆ ₹ 2000 ಪಾವತಿಸಬೇಕೆಂಬ ಸೂಚನೆಯೂ ಜಾಲತಾಣದಲ್ಲಿತ್ತು’ ಎಂದು ತಿಳಿಸಿದರು.

ADVERTISEMENT

‘ಅರ್ಜಿ ಭರ್ತಿ ಮಾಡಿದ್ದ ಕೆಲವರು, ಅರ್ಜಿ ಶುಲ್ಕದ ಬಗ್ಗೆ ಅನುಮಾನಗೊಂಡಿದ್ದರು. ಹೀಗಾಗಿ, ಹಣ ಪಾವತಿ ಮಾಡಿಲ್ಲ’ ಎಂದು ಹೇಳಿದರು.

ವಶಕ್ಕೆ ಪಡೆದು ವಿಚಾರಣೆ: ‘ಜಾಲತಾಣಕ್ಕೆ ಲಿಂಕ್‌ ಮಾಡಲಾಗಿದ್ದ ಮೊಬೈಲ್ ನಂಬರ್ ಆಧರಿಸಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ, ಆತನ ಹೆಸರಿನಲ್ಲಿ ಆರೋಪಿಗಳು ಸಿಮ್‌ಕಾರ್ಡ್ ಖರೀದಿಸಿ ಕೃತ್ಯ ಎಸಗಿದ್ದು ಗೊತ್ತಾಗಿದೆ. ಸೈಬರ್ ವಂಚಕರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ಬಂದರು ನೇಮಕಾತಿ ಹೆಸರಿನಲ್ಲೂ ವಂಚನೆ: ‘ಉಡುಪಿ ಬಂದರಿನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಹೆಸರಿನಲ್ಲಿ ನಕಲಿ ಜಾಲತಾಣ ಸೃಷ್ಟಿಸಿ, ಅಭ್ಯರ್ಥಿಗಳಿಂದ ಹಣ ಪಡೆದು ವಂಚಿಸಿರುವುದು ಗಮನಕ್ಕೆ ಬಂದಿದೆ. ಈ ಕೃತ್ಯ ಎಸಗಿರುವ ಆರೋಪಿಗಳೇ ಪೊಲೀಸ್ ನೇಮಕಾತಿ ಹೆಸರಿನಲ್ಲಿ ವಂಚಿಸಿರುವುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.