ADVERTISEMENT

ರಾತ್ರೋರಾತ್ರಿ ಖಾತೆ ಬದಲು: ಪಟ್ಟು ಹಿಡಿದು ಬಯಸಿದ್ದನ್ನು ಗಿಟ್ಟಿಸಿದ ಸಚಿವರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 18:56 IST
Last Updated 11 ಫೆಬ್ರುವರಿ 2020, 18:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನೂತನ ಸಚಿವರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಖಾತೆಗಳನ್ನು ಹಂಚಿಕೆ ಮಾಡಿದ 24 ಗಂಟೆಯೊಳಗೇ ಬದಲಿಸಿ ಮರು ಹಂಚಿಕೆ ಮಾಡಿ ಹೊಸ ‘ಪರಂಪರೆ’ಗೆ ನಾಂದಿ ಹಾಡಿದ್ದಾರೆ.

ಇತ್ತೀಚೆಗಷ್ಟೇ ಸಂಪುಟಕ್ಕೆ ಸೇರ್ಪಡೆಯಾದ ಸಚಿವರಿಗೆ ಸೋಮವಾರವಷ್ಟೇ ಖಾತೆ ಹಂಚಿಕೆ ಮಾಡಲಾಗಿತ್ತು. ಇವರಲ್ಲಿ ಬಿ.ಗೋಪಾಲಯ್ಯ, ಆನಂದ ಸಿಂಗ್‌ ಮತ್ತು ಬಿ.ಸಿ.ಪಾಟೀಲ ಅವರು ಮುಖ್ಯಮಂತ್ರಿ ಅವರನ್ನು ಅಂದು ರಾತ್ರಿಯೇ ಭೇಟಿ ಮಾಡಿ ತಮಗೆ ನೀಡಿದ ಖಾತೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಬದಲಿಸಿಕೊಡುವಂತೆ ಪಟ್ಟು ಹಿಡಿದರು ಎಂದು ಹೇಳಲಾಗಿದೆ.

ಅತೃಪ್ತರ ಒತ್ತಡಕ್ಕೆ ಮಣಿದ ಯಡಿಯೂರಪ್ಪ ಖಾತೆಗಳನ್ನು ಬದಲಿಸಿಕೊಡಲು ಒಪ್ಪಿಕೊಂಡರು. ಅದಕ್ಕೆ ಪೂರಕವಾಗಿ ಮಂಗಳವಾರ ಬೆಳಿಗ್ಗೆ ಖಾತೆಗಳ ಪರಿಷ್ಕೃತ ಪಟ್ಟಿ ಸಿದ್ಧಪಡಿಸಿದರು. ಆದರೆ, ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ ಸುಧಾಕರ್‌ ಅವರ ಖಾತೆ ಬದಲಾವಣೆ ಆಗಿಲ್ಲ.

ADVERTISEMENT

ಹಿರಿಯ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಗೃಹ ಖಾತೆ ಜತೆಗೆ ಸಹಕಾರ ನೀಡಲಾಗಿತ್ತು, ಅದನ್ನು ಹಿಂದಕ್ಕೆ ಪಡೆದು ಕೃಷಿ ಖಾತೆಯನ್ನು ನೀಡಲಾಗಿತ್ತು. ಈಗ ಅದನ್ನು ಹಿಂಪಡೆಯಲಾಗಿದೆ. ಅರಣ್ಯ ಖಾತೆ ಮೊದಲಿಗೆ ಬಿ.ಸಿ.ಪಾಟೀಲ ಅವರಿಗೆ ನೀಡಲಾಗಿತ್ತು. ಪರಿಸರ ಸಿ.ಸಿ. ಪಾಟೀಲ ಅವರ ಬಳಿಯೇ ಇತ್ತು. ಎರಡನ್ನೂ ಸೇರಿಸಿ ಆನಂದ ಸಿಂಗ್‌ ಅವರಿಗೆ ನೀಡಲಾಗಿದೆ.

ಬದಲಾದ ಖಾತೆಗಳು

*ಆನಂದಸಿಂಗ್–ಅರಣ್ಯ, ಪರಿಸರ, ಜೀವಿಶಾಸ್ತ್ರ

*ಕೆ.ಗೋಪಾಲಯ್ಯ–ಆಹಾರ ಮತ್ತು ನಾಗರಿಕ ಪೂರೈಕೆ

* ಬಿ.ಸಿ.ಪಾಟೀಲ–ಕೃಷಿ

* ಶ್ರೀಮಂತ ಪಾಟೀಲ–ಜವಳಿ, ಕೈಮಗ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ

* ಬೈರತಿ ಬಸವರಾಜ್– ನಗರಾಭಿವೃದ್ಧಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ

* ಶಿವರಾಮ ಹೆಬ್ಬಾರ್‌– ಕಾರ್ಮಿಕ, ಸಕ್ಕರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.