ADVERTISEMENT

ಸಭೆ, ಸಮಾರಂಭಕ್ಕೆ ಮತ್ತೆ ನಿರ್ಬಂಧ?

ತಜ್ಞರ ಜತೆಗಿನ ಸಭೆ ಬಳಿಕ ಸಚಿವ ಡಾ.ಕೆ. ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 17:50 IST
Last Updated 29 ಸೆಪ್ಟೆಂಬರ್ 2020, 17:50 IST
ಸುಧಾಕರ್
ಸುಧಾಕರ್   

ಬೆಂಗಳೂರು: ‘ರಾಜ್ಯದಲ್ಲಿ ಕೊರೊನಾ‌ ಸೋಂಕಿತರ ಸಂಖ್ಯೆ ಮತ್ತೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಸಭೆ, ಸಮಾರಂಭಗಳಿಗೆ ನಿರ್ಬಂಧ ಹಾಕಲು ತೀರ್ಮಾನಿಸಲಾಗಿದೆ. ಎರಡು ದಿನಗಳೊಳಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಧಾನಸೌಧದಲ್ಲಿ ತಜ್ಞರ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಾಕ್‌ಡೌನ್‌ ಸಂಪೂರ್ಣ ಹಿಂಪಡೆದ ಬಳಿಕ ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಜನರು ಗುಂಪುಗೂಡುತ್ತಿರುವುದರಿಂದ ಸೋಂಕು ವೇಗವಾಗಿ ಹಬ್ಬುತ್ತಿದೆ’ ಎಂದರು.

ಲಾಕ್‌ಡೌನ್‌ ಅವಧಿಯಲ್ಲಿ ಇದ್ದಂತೆ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಜಿಲ್ಲಾಡಳಿತದ ಅನುಮತಿ ಪಡೆದು, 100 ಜನರಿಗೆ ಸೀಮಿತವಾಗಿ ಸಭೆ, ಸಮಾರಂಭ ನಡೆಸಲು ಮಾತ್ರ ಅವಕಾಶ ನೀಡುವ ಪ್ರಸ್ತಾವವಿದೆ ಎಂದು ತಿಳಿಸಿದರು.

ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಮಾಸ್ಕ್‌ ಧರಿಸದೇ ಓಡಾಡುವವರು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಆದೇಶ ಹೊರಡಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

‘ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್‌ ಧರಿಸುವುದೇ ಲಸಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ನಾವು ಈಗ ಕೊರೊನಾ ವಿರುದ್ಧ ಹೋರಾಟದ ಮಧ್ಯ ಭಾಗದಲ್ಲಿ ಇದ್ದೇವೆ. ಮಾಸ್ಕ್ ಧರಿಸದೇ ಯಾರೂ ಓಡಾಡಬಾರದು. ಮಾಸ್ಕ್‌ ಹೊರತಾಗಿ ಕೋವಿಡ್‌ ನಿಯಂತ್ರಣ ಅಸಾಧ್ಯ’ ಎಂದರು.‌

ಏಳು ಜಿಲ್ಲೆಗಳಲ್ಲಿ ಹೆಚ್ಚಳ:ರಾಜ್ಯದ ಏಳು ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಶೇ 12ರಷ್ಟು ಏರಿಕೆ ಕಂಡುಬಂದಿದೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಮರಣ ಪ್ರಮಾಣ ಶೇ 1.5ರಷ್ಟಿದೆ. ಅದನ್ನು ಶೇ 1ಕ್ಕೆ ಇಳಿಸುವ ಗುರಿಯೊಂದಿಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಕೋವಿಡ್‌ ಪತ್ತೆ ಪರೀಕ್ಷೆಯನ್ನು ಮೂರು ಪಟ್ಟು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಅದರಂತೆ ಎಲ್ಲ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ. ಹಂತ ಹಂತವಾಗಿ ಕೋವಿಡ್‌ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.