
ಬೆಂಗಳೂರು: ಯಾವುದೇ ಜಿಲ್ಲೆಯ ಯಾವುದೇ ವಸ್ತುವನ್ನು ರಫ್ತು ಮಾಡಲು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಅಂಚೆ ಇಲಾಖೆಯು ಪ್ರತಿ ಜಿಲ್ಲೆಯಲ್ಲಿ ಎರಡು–ಮೂರು ಡಾಕ್ ಘರ್ ನಿರ್ಯಾತ್ ಕೇಂದ್ರಗಳನ್ನು ತೆರೆದಿದೆ.
ಅಂಚೆ ಇಲಾಖೆಯು 200ಕ್ಕೂ ಹೆಚ್ಚು ದೇಶಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಲಾಜಿಸ್ಟಿಕ್ಸ್ ಜಾಲವನ್ನು ನಿರ್ವಹಿಸುತ್ತಿದೆ. ಸಾರ್ವತ್ರಿಕ ಅಂಚೆ ಒಕ್ಕೂಟ (ಯುಪಿಯು) ಮತ್ತು ಅಂತರರಾಷ್ಟ್ರೀಯ ಅಂಚೆ ಆಡಳಿತವು ಭಾರತೀಯ ಅಂಚೆಗೆ ಬೆಂಬಲ ನೀಡಿವೆ. ಕರ್ನಾಟಕದಲ್ಲಿ, ಅಂಚೆ ವೃತ್ತವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 106 ಡಾಕ್ ಘರ್ ನಿರ್ಯಾತ್ ಕೇಂದ್ರಗಳನ್ನು (ಡಿಎನ್‌ಕೆಎಸ್) ಸ್ಥಾಪಿಸಿದೆ. ಇದರಲ್ಲಿ ಆರು ಕೇಂದ್ರಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿವೆ.
ರಾಜ್ಯದ ಮೂಲೆ ಮೂಲೆಯಿಂದ ರಫ್ತುದಾರರು ಇಂಡಿಯಾ ಅಂಚೆಯ ರಫ್ತು ಸೌಲಭ್ಯ ಮತ್ತು ಅಂತರರಾಷ್ಟ್ರೀಯ ಮೇಲ್ ಸೇವೆಗಳನ್ನು ಅನುಕೂಲಕರವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಜಾಗತಿಕ ವ್ಯಾಪ್ತಿಯು, ಪ್ರಮುಖ ಸರ್ಕಾರಿ ವೇದಿಕೆಗಳೊಂದಿಗೆ ತಡೆರಹಿತ ಡಿಜಿಟಲ್ ಸಂಯೋಜನೆಯೊಂದಿಗೆ ರಫ್ತುದಾರರಿಗೆ ಅದರಲ್ಲಿಯೂ ಸಣ್ಣ ಉದ್ದಿಮೆದಾರರಿಗೆ ಕುಶಲಕರ್ಮಿಗಳಿಗೆ, ಇ–ಕಾಮರ್ಸ್ ಮಾರಾಟಗಾರರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಸರಳ ಮತ್ತು ಕಡಿಮೆ ವೆಚ್ಚದಲ್ಲಿ ತೆರೆದಿಟ್ಟಿದೆ ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಡಾಕ್ ಘರ್ ನಿರ್ಯಾತ್ ಕೇಂದ್ರಗಳು ಜಿಲ್ಲೆಗಳಲ್ಲಿ ಏಕಗವಾಕ್ಷಿ ಸೌಲಭ್ಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಗ್ರಾಮೀಣ ಉದ್ಯಮಿಗಳಷ್ಟೇ ಅಲ್ಲದೆ ಮೊದಲ ಬಾರಿಗೆ ರಫ್ತು ಮಾಡುವವರಿಗೂ ಸಹಕಾರಿಯಾಗಲಿದೆ. ಆನ್‌ಲೈನ್ ರಫ್ತು ದಸ್ತಾವೇಜು ಮತ್ತು ಸುಂಕ ಘೋಷಣೆಗಳಲ್ಲಿ ಸಹಾಯ, ಪ್ಯಾಕೇಜಿಂಗ್, ವರ್ಗೀಕರಣಗಳ ಬಗ್ಗೆ ಮಾರ್ಗದರ್ಶನ, ಡಿಜಿಟಲ್ ಅಂಚೆ ರಫ್ತು ಪ್ರಕ್ರಿಯೆಗೆ ಪ್ರವೇಶ ನೀಡುವುದು, ಸಾಧ್ಯ ಇರುವ ಪ್ರದೇಶಗಳಲ್ಲಿ ರಫ್ತುದಾರರ ಮನೆ ಬಾಗಿಲಿಗೆ ಹೋಗಿ ವಸ್ತುಗಳನ್ನು ಸ್ವೀಕರಿಸುವ ಸೌಲಭ್ಯ ನೀಡಲಾಗಿದೆ ಎಂದು ಸಹಾಯಕ ನಿರ್ದೇಶಕ (ಅಂತರರಾಷ್ಟ್ರೀಯ ಅಂಚೆ) ವೆಂಕಟೇಶಯ್ಯ ಎ.ವಿ. ತಿಳಿಸಿದರು.
ಕಡಿಮೆ ವೆಚ್ಚ ಸಮಯ ಉಳಿತಾಯ
ರಾಜ್ಯದ ಯಾವುದೋ ಮೂಲೆಯ ವೈದ್ಯರೊಬ್ಬರು ಮಾತ್ರೆಗಳನ್ನು ರಫ್ತು ಮಾಡಬೇಕಾಗಿರುತ್ತದೆ. ಅದು ಒಂದು ಕೆ.ಜಿ. ಕೂಡ ಇರುವುದಿಲ್ಲ. ಅವರು ಬೆಂಗಳೂರಿಗೆ ಬರುವ ಬದಲು ಅಲ್ಲೇ ರಫ್ತು ಮಾಡಿದರೆ ವೆಚ್ಚವೂ ಕಡಿಮೆಯಾಗುತ್ತದೆ. ಸಮಯವೂ ಉಳಿತಾಯವಾಗುತ್ತದೆ. 35 ಕೆ.ಜಿ.ವರೆಗೆ ರಫ್ತು ಮಾಡಲು ಅವಕಾಶ ನೀಡಲಾಗಿದೆ ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ತಿಳಿಸಿದರು. ಡಾಕ್ ಘರ್ ನಿರ್ಯಾತ್ ಕೇಂದ್ರಗಳನ್ನು ಬಳಸಿಕೊಳ್ಳಲು ಜಿಲ್ಲಾ ಕೈಗಾರಿಕಾ ಕೇಂದ್ರಗಳು ವಾಣಿಜ್ಯ ಮಂಡಳಿಗಳು ರಫ್ತು ಉತ್ತೇಜನ ಮಂಡಳಿಗಳು ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ನಿಕಟವಾಗಿ ಸಂಪರ್ಕ ಇಟ್ಟುಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ಕಾರ್ಯಾಗಾರಗಳನ್ನು ಕೂಡ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.