ADVERTISEMENT

ಪೌತಿ ಖಾತೆಗೆ ಗಂಡುಮಕ್ಕಳದ್ದೇ ತೊಡಕು: ಕೃಷ್ಣ ಬೈರೇಗೌಡ

ಭರತ್ ಜೋಶಿ
Published 12 ಫೆಬ್ರುವರಿ 2026, 0:30 IST
Last Updated 12 ಫೆಬ್ರುವರಿ 2026, 0:30 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಕೃಷಿ ಜಮೀನುಗಳನ್ನು ಅವರ ವಾರಸುದಾರರಿಗೆ ಪೌತಿಖಾತೆ ಮಾಡಿಕೊಡುವ ರಾಜ್ಯ ಸರ್ಕಾರದ ಅಭಿಯಾನಕ್ಕೆ, ಹೆಣ್ಣುಮಕ್ಕಳಿಗೆ ಪಾಲು ನೀಡಲೊಪ್ಪದ ಗಂಡುಮಕ್ಕಳ ಅಸಹಕಾರದಿಂದ ತೊಡಕಾಗಿದೆ.

‘ರಾಜ್ಯದಲ್ಲಿ 4.1 ಕೋಟಿ ಕೃಷಿ ಜಮೀನುಗಳಿವೆ. ನಮ್ಮ ಸರ್ಕಾರ ಬಂದ ನಂತರ ಕೃಷಿ ಜಮೀನಿನ ದಾಖಲೆಗಳಿಗೆ ಆಧಾರ್‌ ಜೋಡಣೆ ಕಾರ್ಯ ಆರಂಭಿಸಲಾಯಿತು. ಆಗ 49.06 ಲಕ್ಷ ಕೃಷಿ ಜಮೀನುಗಳು ಇನ್ನೂ ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ಇರುವುದು ಪತ್ತೆಯಾಯಿತು. ಅದನ್ನು ನೈಜ ವಾರಸುದಾರರಿಗೆ ವರ್ಗಾಯಿಸುವ ಸಲುವಾಗಿ ಸರ್ಕಾರದ ವತಿಯಿಂದಲೇ ಪೌತಿ ಖಾತೆ ಮಾಡಿಕೊಡುವ ಅಭಿಯಾನ ಆರಂಭಿಸಿದೆವು. ಆದರೆ ಈಗ ಅದಕ್ಕೆ ತೊಡಕು ಎದುರಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

‘ಪ್ರಜಾವಾಣಿ’ ಜತೆಗೆ ಮಾಹಿತಿ ಹಂಚಿಕೊಂಡ ಅವರು, ‘ಪೌತಿ ಖಾತೆ ಅಭಿಯಾನದ ಅಡಿಯಲ್ಲಿ ಗ್ರಾಮ ಆಡಳಿತಾಧಿಕಾರಿಯು ಪ್ರತಿ ಮನೆಗೂ ಹೋಗಿ, ಮೃತ ವ್ಯಕ್ತಿಗಳ ವಾರಸುದಾರರ ವಿವರ ಕಲೆಹಾಕಬೇಕು ಎಂದು ಸೂಚಿಸಿದ್ದೆವು. ಆದರೆ ಹಲವು ಕುಟುಂಬದವರು ಮಾಹಿತಿ ನೀಡಲು ಮುಂದೆ ಬರುತ್ತಿಲ್ಲ. ಹೆಣ್ಣು ಮಕ್ಕಳಿಗೆ ಪಾಲು ನೀಡಲೇಬಾರದು ಎಂಬ ಕಾರಣಕ್ಕೆ ಹಾಗೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ’ ಎಂದು ವಿವರಿಸಿದರು.

ADVERTISEMENT

‘ಪೌತಿ ಖಾತೆ ಮಾಡಲು ವಂಶವೃಕ್ಷದ ಆಧಾರದ ಮೇಲೆ ವಾರಸುದಾರರನ್ನು ನಿರ್ಧರಿಸಲಾಗುತ್ತಿದೆ. ಇಲ್ಲದಿದ್ದಲ್ಲಿ ಕುಟುಂಬದವರು ಪಾಲುಪಟ್ಟಿ ಒದಗಿಸಬೇಕು. ಅದರಲ್ಲಿನ ಪಾಲಿನಂತೆ ಪೌತಿ ಖಾತೆಯಾಗುತ್ತದೆ. ಅಲ್ಲಿ ಕುಟುಂಬದ ಮಹಿಳಾ ಸದಸ್ಯರನ್ನು ಬಿಡುವಂತಿಲ್ಲ. ಒಂದೊಮ್ಮೆ ಮಹಿಳಾ ಸದಸ್ಯರು ಹಕ್ಕು ಬಿಡುಗಡೆ ಪತ್ರ ಸಲ್ಲಿಸಿದರಷ್ಟೇ ಪೌತಿ ಖಾತೆಯಿಂದ ಅವರನ್ನು ಬಿಡಲು ಅವಕಾಶವಿದೆ. ಆದರೆ ಹಲವು ಕುಟುಂಬದವರು ಪೌತಿ ಖಾತೆ ಮಾಡಿಸಿಕೊಳ್ಳಲು ಸಿದ್ಧರಿಲ್ಲ. ಇಷ್ಟು ಅಸಹಕಾರದ ಹೊರತಾಗಿಯೂ 12 ಲಕ್ಷ ಕೃಷಿ ಜಮೀನುಗಳ ಪೌತಿ ಖಾತೆ ಮಾಡಿಕೊಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪೌತಿ ಖಾತೆ ಆಗದೇ ಇರುವ ಜಮೀನುಗಳ ಪೈಕಿ ಶೇ 5ರಷ್ಟು ನ್ಯಾಯಾಲಯಗಳ ವ್ಯಾಜ್ಯದಲ್ಲಿದ್ದರೆ, ಶೇ 20ರಷ್ಟು ಒಮ್ಮತ ಇಲ್ಲದ ಕಾರಣಕ್ಕೆ ಬಾಕಿಯಾಗಿವೆ’ ಎಂದು ವಿವರ ನೀಡಿದರು.

ಮೃತರ ಹೆಸರಿನಲ್ಲೇ ಖಾತೆ ಇದ್ದರೆ ಜಮೀನಿನ ಮೇಲೆ ಸಾಲ ಮತ್ತು ಸರ್ಕಾರಿ ಸವಲತ್ತು ಸಿಗುವುದಿಲ್ಲ. ಹೀಗಿದ್ದೂ ಹಲವು ಕುಟುಂಬಗಳು ಪೌತಿ ಖಾತೆಗೆ ಒಲವು ತೋರುತ್ತಿಲ್ಲ
ಕೃಷ್ಣ ಬೈರೇಗೌಡ ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.