ಬೆಂಗಳೂರು: ಬಡತನ, ಶೋಷಣೆ, ಪರೀಕ್ಷೆಯಲ್ಲಿ ಅನುತ್ತೀರ್ಣ ಸೇರಿದಂತೆ ವಿವಿಧ ಕಾರಣಗಳಿಂದ ಮನೆ ತೊರೆದ 250 ಬಾಲಕರು ಸೇರಿದಂತೆ 290 ಮಕ್ಕಳನ್ನು ರೈಲ್ವೆ ಸುರಕ್ಷಾ ಪಡೆಯು (ಆರ್‌ಪಿಎಫ್) ರಕ್ಷಿಸಿದೆ.
ಈ ವರ್ಷದಲ್ಲಿ ಬೆಂಗಳೂರು ವಿಭಾಗವೊಂದರಲ್ಲಿಯೇ ರೈಲ್ವೆ ಸುರಕ್ಷಾ ಪಡೆ ರಕ್ಷಿಸಿರುವ ಮಕ್ಕಳ ಸಂಖ್ಯೆಯಾಗಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶದ ಈ ಮಕ್ಕಳು 18 ವರ್ಷದ ಒಳಗಿನವರಾಗಿದ್ದು, ಇದರಲ್ಲಿ 14 ರಿಂದ 16 ವರ್ಷದೊಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರಾಜ್ಯದ ಮಕ್ಕಳು ಸೇರಿದಂತೆ ಹೊರ ರಾಜ್ಯದವರು ಸಹ ಇದ್ದಾರೆ.
‘ಕಲಿಕೆಯಲ್ಲಿ ನಿರಾಸಕ್ತಿ, ಪೋಷಕರೊಂದಿಗೆ ಜಗಳ, ಹೊರಗಿನ ಪ್ರಪಂಚ ನೋಡುವ ಆಸೆ, ಕೌಟುಂಬಿಕ ವಿವಾದ, ಉತ್ತಮ ಅವಕಾಶಗಳನ್ನು ಅರಸುತ್ತಾ ಹಾಗೂ ಅಧಿಕ ಕೂಲಿ ಆಸೆ ಸೇರಿದಂತೆ ವಿವಿಧ ಕಾರಣಗಳಿಂದ ಮಕ್ಕಳು ಮನೆ ತೊರೆದು ಬಂದಿದ್ದಾರೆ’ ಎಂದು ಆರ್‌ಪಿಎಫ್ ಮೂಲಗಳು ತಿಳಿಸಿವೆ.
ಮಕ್ಕಳ ರಕ್ಷಣೆಗಾಗಿ 2018ರ ಮೇ ತಿಂಗಳಲ್ಲಿ ‘ನನ್ಹೆ ಫರಿಶ್ತೆ’ ಕಾರ್ಯಕ್ರಮ ಅನುಷ್ಠಾನಗೊಳಿಸಲಾಯಿತು. ದೇಶದಾದ್ಯಂತ ಈವರೆಗೆ 84,110 ಮಕ್ಕಳನ್ನು ರಕ್ಷಣೆ ಮಾಡಿದೆ. ಕಳೆದ ವರ್ಷ 11,794 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಬೆಂಗಳೂರು ವಿಭಾಗದಲ್ಲಿ 2023 ರಲ್ಲಿ 50 ಬಾಲಕಿಯರು ಸೇರಿದಂತೆ ಒಟ್ಟು 237 ಮಕ್ಕಳನ್ನು ರಕ್ಷಿಸಲಾಗಿತ್ತು.
‘ಮನೆ ತೊರೆದು ಬಂದ ಈ ಮಕ್ಕಳನ್ನು ಸಂಭಾವ್ಯ ಶೋಷಣೆಯಿಂದ ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಮಕ್ಕಳ ಕುರಿತು ದೂರು ದಾಖಲಾದ ತಕ್ಷಣ, ಅವರ ಪತ್ತೆ ಕಾರ್ಯಕ್ಕೆ ಚುರುಕು ನೀಡಲಾಗುತ್ತದೆ. ಎಲ್ಲೆಡೆ ಇರುವ ಆರ್‌ಪಿಎಫ್ ಠಾಣೆಗಳು ಹಾಗೂ ಕಚೇರಿಗಳಿಗೆ ಸಂದೇಶಗಳನ್ನು ರವಾನಿಸುವ ಮೂಲಕ ಕ್ಷಿಪ್ರ ಕಾರ್ಯಾಚರಣೆಗೆ ಸಮನ್ವಯ ಸಾಧಿಸಲಾಗುತ್ತದೆ’ ಎಂದು ಆರ್‌ಪಿಎಫ್ ಅಧಿಕಾರಿಗಳು ತಿಳಿಸಿದರು.
‘ಮೊದಲು ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುತ್ತದೆ. ಬಳಿಕ ಅವರು ಈ ಪ್ರಕರಣಗಳನ್ನು ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ಶಿಫಾರಸು ಮಾಡುತ್ತಾರೆ. ಸಿಡಬ್ಲ್ಯುಸಿಯು ಸಮಗ್ರ ಸಮಾಲೋಚನೆಯ ನಂತರ, ಮಕ್ಕಳನ್ನು ಅವರ ಪೋಷಕರೊಂದಿಗೆ ಕಳುಹಿಸಬೇಕೋ ಅಥವಾ ಹೆಚ್ಚಿನ ಆರೈಕೆ ಮತ್ತು ರಕ್ಷಣೆಗಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕೋ ಎಂಬುದನ್ನು ನಿರ್ಧರಿಸುತ್ತದೆ’ ಎಂದು ಹೇಳಿದರು.
2022ರಲ್ಲಿ ಆರ್‌ಪಿಎಫ್, ಎಲ್ಲ ರೈಲು ನಿಲ್ದಾಣಗಳಲ್ಲಿ ಮಾನವ ಕಳ್ಳ ಸಾಗಣೆ ನಿಗ್ರಹ ಘಟಕಗಳನ್ನು (ಎಎಚ್‌ಟಿಯು) ಸ್ಥಾಪಿಸಿತು. ಮಹಿಳಾ ಅಧಿಕಾರಿಗಳನ್ನೂ ಹೊಂದಿರುವ ಈ ಘಟಕಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತವೆ.
ಪತ್ತೆಯಾಗದ 1,200 ಮಕ್ಕಳು
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ನಾಪತ್ತೆಯಾಗಿರುವ 11,300 ಮಕ್ಕಳ (18 ವರ್ಷದೊಳಗಿನವರು) ಪೈಕಿ 1,200 ಮಕ್ಕಳು ಈವರೆಗೂ ಪತ್ತೆಯಾಗಿಲ್ಲ.
‘ಬಡತನ, ಕೌಟುಂಬಿಕ ಕಲಹ ಸೇರಿದಂತೆ ನಾನಾ ಕಾರಣಗಳಿಗೆ ಮಕ್ಕಳು ಮನೆ ಬಿಟ್ಟು ಹೋಗುತ್ತಿದ್ದಾರೆ. ನಾಪತ್ತೆಯಾಗಿದ್ದ 1,200 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಮನೆಯಲ್ಲಿ ಬಡತನವಿದ್ದರೆ ಮಕ್ಕಳನ್ನು ವಸತಿ ಶಾಲೆ, ಬಾಲ ಮಂದಿರಕ್ಕೆ ದಾಖಲಿಸಬಹುದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.