ADVERTISEMENT

ಕೃಷಿ, ಗೃಹ ಬಳಕೆಗಷ್ಟೇ ಲೋಡ್‌ಶೆಡ್ಡಿಂಗ್‌: ಕೈಗಾರಿಕೆಗಳಿಗೆ ಮಣೆ; ಕೃಷಿ ಕಡೆಗಣನೆ

ಚಂದ್ರಹಾಸ ಹಿರೇಮಳಲಿ
Published 10 ಅಕ್ಟೋಬರ್ 2023, 23:33 IST
Last Updated 10 ಅಕ್ಟೋಬರ್ 2023, 23:33 IST
REUTERS/LISI NIESNER
   REUTERS/LISI NIESNER

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್‌ ಅಭಾವ ತೀವ್ರಗೊಂಡಿದ್ದು, ಕೊರತೆ ಮಧ್ಯೆಯೂ ಎಲ್ಲ ಎಸ್ಕಾಂಗಳು (ವಿದ್ಯುತ್ ‍ಸರಬರಾಜು ಕಂಪನಿಗಳು) ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿ, ಕೃಷಿ ಪಂಪ್‌ಸೆಟ್‌ಗಳನ್ನು ಸಂಪೂರ್ಣ ಕಡೆಗಣಿಸಿವೆ. 

ರಾಜ್ಯದಲ್ಲಿ ವಿದ್ಯುತ್‌ ಕೃಷಿ ವಲಯಕ್ಕೆ ಶೇ 35ರಷ್ಟು, ಕೈಗಾರಿಕಾ ವಲಯಕ್ಕೆ ಶೇ 19.50ರಷ್ಟು ಬಳಕೆಯಾಗುತ್ತಿದೆ. 1.50 ಕೋಟಿ ಗೃಹ ಬಳಕೆದಾರರು ಹಾಗೂ 32 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಉಚಿತ ವಿದ್ಯುತ್‌ ನೀಡುತ್ತಿದೆ. ಹಾಗಾಗಿ, ಆದಾಯದ ಮೂಲವಾದ ಕೈಗಾರಿಕಾ ವಲಯಕ್ಕೆ ವಿದ್ಯುತ್‌ ವ್ಯತ್ಯಯವಾದಂತೆ ಪೂರೈಸಲಾಗುತ್ತಿದ್ದು, ಉಚಿತ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ ಎನ್ನುವುದು ವಿವಿಧ ರೈತ ಸಂಘಟನೆಗಳ ಆರೋಪ.

ಮಳೆ ಅಭಾವದ ಕಾರಣ ಎಲ್ಲೆಡೆ ಬರ ಪರಿಸ್ಥಿತಿ ಸೃಷ್ಟಿಯಾಗಿದೆ. ಜಲಾಶಯಗಳು ಬರಿದಾಗಿವೆ. ಮಳೆಯಾಶ್ರಿತ ಪ್ರದೇಶಗಳ ಬೆಳೆ ಸಂಪೂರ್ಣ ಒಣಗಿವೆ. ನೀರಾವರಿ ಪ್ರದೇಶದ ತೋಟಗಾರಿಕಾ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಆದರೆ, ಕೃಷಿ ಪಂಪ್‌ಸೆಟ್‌ಗಳಿಗೆ ಅಗತ್ಯ ವಿದ್ಯುತ್‌ ಪೂರೈಕೆಯಾಗದೇ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಯಮದಂತೆ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 7 ತಾಸು ತ್ರೀಫೇಸ್‌ ವಿದ್ಯುತ್‌ ಪೂರೈಸಬೇಕು. ಅಕ್ಟೋಬರ್‌ನಲ್ಲಿ ಪೂರೈಕೆಯಾಗಿರುಗುತ್ತಿರುವುದು ಗರಿಷ್ಠ ಎರಡು ತಾಸು ಮಾತ್ರ. 

ADVERTISEMENT

ಪ್ರಸ್ತುತ ಬೇಸಿಗೆಯ ಸಮಯದಲ್ಲಿ ಇರುತ್ತಿದ್ದ ವಿದ್ಯುತ್‌ ಬೇಡಿಕೆ ಕಳೆದ ಎರಡು ತಿಂಗಳಿನಿಂದಲೂ ಮುಂದುವರಿದಿದೆ. ಪ್ರಸ್ತುತ 16 ಸಾವಿರ ಮೆಗಾವಾಟ್‌ಗೆ ಬೇಡಿಕೆ ಇದೆ. ರಾಜ್ಯದ ಒಟ್ಟು ಉತ್ಪಾದನಾ ಸಾಮರ್ಥ್ಯ 32 ಸಾವಿರ ಮೆಗಾವಾಟ್‌ನಷ್ಟಿದೆ. ಹಾಗಿದ್ದರೂ ಜಲಾಶಯಗಳಲ್ಲಿ ನೀರಿನ ಕೊರತೆ, ಕಲ್ಲಿದ್ದಲು ಪೂರೈಕೆಯ ವ್ಯತ್ಯಯ, ಕಳಪೆ ಉತ್ಪಾದನೆ, ನಿರ್ವಹಣಾ ಸಾಮರ್ಥ್ಯ ಮತ್ತಿತರ ಕಾರಣಗಳಿಂದ ಉತ್ಪಾದನೆ 10 ಸಾವಿರ ಮೆಗಾವಾಟ್‌ ದಾಟಿಲ್ಲ. ಕೇಂದ್ರ, ಇತರೆ ರಾಜ್ಯವೂ ಸೇರಿ 14 ಸಾವಿರ ಮೆಗಾವಾಟ್‌ ಲಭ್ಯವಾಗುತ್ತಿದೆ. ಇದರಿಂದ ಬೇಸಿಗೆ ಆರಂಭಕ್ಕೂ ನಾಲ್ಕು ತಿಂಗಳ ಮೊದಲೇ ಲೋಡ್‌ಶೆಡ್ಡಿಂಗ್‌ ಅನಿವಾರ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ.

ಬರದಿಂದ ಮುಂಗಾರಿನ ಫಸಲು ನಾಶವಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ತ್ರೀಫೇಸ್‌ ನೀಡದೇ ತೋಟಗಾರಿಕೆ ಬೆಳೆಗಳನ್ನೂ ಇಂಧನ ಇಲಾಖೆ ಹಾಳುಮಾಡುತ್ತಿದೆ.
-ಎಚ್‌.ಆರ್.ಬಸವರಾಜಪ್ಪ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ
ಕೊರತೆ ನೀಗಿಸಲು ಅಗತ್ಯವಾದ ವಿದ್ಯುತ್‌ ಖರೀದಿಸಲು ಉತ್ತರದ ರಾಜ್ಯಗಳ ಜತೆ ಮಾತುಕತೆ ನಡೆದಿದೆ. ಶೀಘ್ರ ಬೇಡಿಕೆಗೆ ತಕ್ಕ ವಿದ್ಯುತ್‌ ಲಭ್ಯವಾಗಲಿದೆ.
-ಕೆ.ಜೆ.ಜಾರ್ಜ್‌, ಇಂಧನ ಸಚಿವ

ಹೊರ ರಾಜ್ಯಗಳ ವಿದ್ಯುತ್‌ ಪೂರೈಕೆಯೂ ಸ್ಥಗಿತ

ಹೊರ ರಾಜ್ಯಗಳಿಂದಾಗುತ್ತಿರುವ ವಿದ್ಯುತ್‌ ಪೂರೈಕೆ ಯಲ್ಲೂ ವ್ಯತ್ಯಯವಾಗಿದೆ. 2ತಿಂಗಳು ಕೇಂದ್ರ ಹಾಗೂ ಇತರೆ ರಾಜ್ಯಗಳಿಂದ 6 ಸಾವಿರ ಮೆಗಾವಾಟ್‌ ಖರೀದಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಕೇಂದ್ರ ಗ್ರಿಡ್‌ 3 ಸಾವಿರ ಮೆಗಾವಾಟ್‌ ಪೂರೈಸಿದರೆ, ಇತರೆ ರಾಜ್ಯಗಳಿಂದ ದೊರೆತಿರುವುದು 1 ಸಾವಿರ ಮೆಗಾವಾಟ್‌ ಮಾತ್ರ. ಹಾಗಾಗಿ, ರಾಜ್ಯದ ವಿದ್ಯುತ್ ಕ್ಷಾಮ ಮತ್ತಷ್ಟು ಹೆಚ್ಚಾಗಿದೆ. ಕೊರತೆ ನೀಗಿಸಲು ಪಂಜಾಬ್‌, ಉತ್ತರ ಪ್ರದೇಶ ಸರ್ಕಾರ ಗಳ ಜತೆ ಮಾತುಕತೆ ನಡೆಸುತ್ತಿರುವುದಾಗಿ ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

1.50 ಲಕ್ಷ ಪಂಪ್‌ಸೆಟ್‌ಗಳಿಗೆ ಇಲ್ಲ ಸಂಪರ್ಕ

ರಾಜ್ಯದ ರೈತರು 1.50 ಲಕ್ಷ ಪಂಪ್‌ಸೆಟ್‌ಗಳಿಗೆ
ಸಂಪರ್ಕ ಕಲ್ಪಿಸಲು ವಿವಿಧ ಎಸ್ಕಾಂಗಳಿಗೆ ಅರ್ಜಿ ಸಲ್ಲಿಸಿದ್ದಾರೆ. 2015ರಿಂದ ಅಂತಹ ಪಂಪ್‌ಸೆಟ್‌ಗಳಿಗೆ ಸಂಪರ್ಕವೇ ಸಿಕ್ಕಿಲ್ಲ.

ಅಕ್ರಮ–ಸಕ್ರಮ ಯೋಜನೆ ಅಡಿ ಸಂಪರ್ಕ ಕಲ್ಪಿಸಲು ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ₹6,099 ಕೋಟಿ ವೆಚ್ಚ ಮಾಡುತ್ತಿದೆ. ಬರ ಪರಿಸ್ಥಿತಿಯ ಈ ಸಮಯದಲ್ಲಿ ತುರ್ತು ಕ್ರಮಕೈಗೊಂಡು ರೈತರಿಗೆ ನೆರವಾಗಬೇಕು ಎನ್ನುತ್ತಾರೆ ನೆಲಮಂಗಲ ತಾಲ್ಲೂಕು ಮಾರಗೊಂಡನಹಳ್ಳಿಯ ರೈತ ಎಂ.ಆರ್.ಚಿಕ್ಕರಾಮೇಗೌಡ.

ಶಾಸಕರ ಸಭೆಗೂ ತಟ್ಟಿದ ಲೋಡ್‌ ಶೆಡ್ಡಿಂಗ್ ಬಿಸಿ!

ಕುಣಿಗಲ್ (ತುಮಕೂರು): ಅಮೃತ ಯೋಜನೆ ಕುರಿತು ಚರ್ಚಿಸಲು ಸೋಮವಾರ ರಾತ್ರಿ ಶಾಸಕ ಡಾ.ರಂಗನಾಥ್‌ ಕರೆದ ಪೂರ್ವಭಾವಿ ಸಭೆಗೂ ಲೋಡ್ ಶೆಡ್ಡಿಂಗ್ ಬಿಸಿ ತಟ್ಟಿತು.

ಅಧಿಕಾರಿಗಳೊಂದಿಗೆ ಶಾಸಕರು ಸ್ಥಳೀಯ ಪುರಸಭೆಯಲ್ಲಿ ಸಭೆ ನಡೆಸುತ್ತಿರುವಾಗಲೇ ವಿದ್ಯುತ್‌ ಕೈಕೊಟ್ಟಿತು. ಹಾಗಾಗಿ ಮೊಬೈಲ್ ಟಾರ್ಚ್‌ ಬೆಳಕಿನಲ್ಲಿಯೇ ಶಾಸಕರು ಸಭೆ ನಡೆಸಿದರು. ಸಭೆ ಮುಗಿಯುವವರೆಗೂ ಅಧಿಕಾರಿ
ಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಟಾರ್ಚ್‌ ಹಾಕಿ ಶಾಸಕರ ಪಕ್ಕದಲ್ಲಿ ನಿಂತಿದ್ದರು.

‘ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಯಾಗದ ಕಾರಣ ಸಮಸ್ಯೆ ಉಂಟಾಗುತ್ತಿದೆ. ವಿದ್ಯುತ್‌ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲಿಯೇ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಲಿದೆ’ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.