ಬೆಂಗಳೂರು: ಆಯುಷ್ ಇಲಾಖೆಯಲ್ಲಿ ಅಧಿಕಾರ ಸಂಘರ್ಷ ಏರ್ಪಟ್ಟಿದ್ದು, ಒಂದೇ ಹುದ್ದೆಯನ್ನು ಇಬ್ಬರು ಅಧಿಕಾರಿಗಳು ಅಲಂಕರಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಯುಷ್ ಅಧಿಕಾರಿಯಾಗಿ ಡಾ. ಶಾಂತಲಾ ಎನ್. ಮತ್ತು ಡಾ. ಶಹಬುದ್ದೀನ್ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳ ಈ ನಡೆಯಿಂದ ಕೆಳ ಹಂತದ ಅಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಗೊಂದಲಕ್ಕೆ ಒಳಗಾಗಿದ್ದು, ಯಾರ ಸೂಚನೆಗಳನ್ನು ಪಾಲಿಸಬೇಕೆಂದು ತಿಳಿಯದೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಡಾ. ಶಹಬುದ್ದೀನ್ ಅವರನ್ನು ಇದೇ 6ರಂದು ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಯುಷ್ ಅಧಿಕಾರಿ ಹುದ್ದೆಯಿಂದ ಬಿಡುಗಡೆ ಮಾಡಿ ಆಯುಷ್ ಇಲಾಖೆ ಆದೇಶ ಹೊರಡಿಸಿತ್ತು. ಅವರ ಸ್ಥಾನಕ್ಕೆ ಹೆಬ್ಬಾಳದ ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಶಾಂತಲಾ ಅವರನ್ನು ಪ್ರಭಾರಿಯಾಗಿ ನೇಮಿಸಲಾಗಿತ್ತು. ಇದೇ 9ರಂದು ಅವರು ಹುದ್ದೆ ಅಲಂಕರಿಸಿದ್ದರು. ಇದೇ 13ರಂದು ಶಾಂತಲಾ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಯುಷ್ ಅಧಿಕಾರಿಯಾಗಿಯೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಇಲಾಖೆ ಆಯುಕ್ತರು ಸೂಚಿಸಿದ್ದರು.
ಶಹಬುದ್ದೀನ್ ಅವರು ತಮ್ಮ ಬಿಡುಗಡೆ ಪ್ರಶ್ನಿಸಿ, ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆ.ಎ.ಟಿ) ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಹುದ್ದೆಯಿಂದ ಅವರ ಬಿಡುಗಡೆಗೆ ಕೆ.ಎ.ಟಿ. ತಡೆಯಾಜ್ಞೆ ನೀಡಿದ್ದರಿಂದ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿ, ಈ ಮೊದಲಿನ ಹುದ್ದೆ ಅಲಂಕರಿಸಿದ್ದಾರೆ.
ಒಂದೇ ಕಚೇರಿ: ಡಾ. ಶಹಬುದ್ದೀನ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಹೊರಡಿಸಲಾದ ಆದೇಶದಲ್ಲಿ, ಮುಂದಿನ ಸ್ಥಳ ನಿಯುಕ್ತಿಗಾಗಿ ಆಯುಷ್ ಇಲಾಖೆ ಆಯುಕ್ತರ ಬಳಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಆದರೆ, ಆದೇಶಕ್ಕೆ ಕೆ.ಎ.ಟಿ. ತಡೆಯಾಜ್ಞೆ ನೀಡಿದ್ದರಿಂದ ಡಾ. ಶಹಬುದ್ದೀನ್ ಅವರು ಬೆಂಗಳೂರು ನಗರ ಜಿಲ್ಲೆ ಆಯುಷ್ ಕಚೇರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದ
ರಿಂದಾಗಿ ಒಂದೇ ಕಚೇರಿ, ಖುರ್ಚಿಯನ್ನು ಇಬ್ಬರು ಅಲಂಕರಿ
ಸುತ್ತಿದ್ದಾರೆ. ಇದು ಆಡಳಿತಾತ್ಮಕ ಚಟುವಟಿಕೆಗಳಿಗೆ ತೊಡಕಾಗುತ್ತಿದೆ ಎಂದು ಸಿಬ್ಬಂದಿ ದೂರಿದ್ದಾರೆ.
‘ಒಂದೇ ಹುದ್ದೆಯಲ್ಲಿ ಇಬ್ಬರು ಕಾರ್ಯನಿರ್ವಹಿಸುತ್ತಿರುವುದರಿಂದ ಗೊಂದಲಕ್ಕೆ ಒಳಗಾಗಿದ್ದೇವೆ. ಶಹಬುದ್ದೀನ್ ಅವರು ಸಹ ಸಭೆ ನಡೆಸಿ, ವಿವಿಧ ಸೂಚನೆಗಳನ್ನು ನೀಡುತ್ತಿದ್ದಾರೆ. ಯಾರ ಆದೇಶ ಪಾಲಿಸಬೇಕು ಎಂಬುದು ತಿಳಿಯದಾಗಿದೆ. ಈ ಸಂಗತಿಯನ್ನು ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯಾಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಶಹಬುದ್ದೀನ್ ಅವರು ದೂರವಾಣಿ ಕರೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.