ADVERTISEMENT

ಪ್ರಜಾಕೀಯ ಟಿಕೆಟ್‌ಗಾಗಿ ಬಸ್‍ನಲ್ಲಿ ಜನಾಭಿಪ್ರಾಯ ಸಂಗ್ರಹಿಸಿದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 10:45 IST
Last Updated 16 ಜನವರಿ 2023, 10:45 IST
ಬೀರೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಬಸ್‍ನಲ್ಲಿ ಪ್ರಯಾಣಿಕರ ಬಳಿ ಜನಾಭಿಪ್ರಾಯ ಸಂಗ್ರಹಿಸುತ್ತಿರುವ ಲೋಹಿತ್‌
ಬೀರೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಬಸ್‍ನಲ್ಲಿ ಪ್ರಯಾಣಿಕರ ಬಳಿ ಜನಾಭಿಪ್ರಾಯ ಸಂಗ್ರಹಿಸುತ್ತಿರುವ ಲೋಹಿತ್‌   

ಬೀರೂರು: ಇಲ್ಲಿಂದ ಚಿಕ್ಕಮಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಶನಿವಾರ ವಿಭಿನ್ನ ಅನುಭವ ಕಾದಿತ್ತು. ಸಾಮಾನ್ಯವಾಗಿ ಬಸ್‍ಗಳಲ್ಲಿ ವಿವಿಧ ವಸ್ತುಗಳನ್ನು ಮಾರಾಟಕ್ಕೆ ಬರುವವರು ಕಾಣಿಸುತ್ತಾರೆ. ಆದರೆ, ಬಸ್‌ನಲ್ಲಿದ್ದ ವ್ಯಕ್ತಿ, ‘ನಾನು ಕಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ ಆಗ ಬಯಸಿದ್ದೇನೆ. ಈ ಕರಪತ್ರ ಓದಿ, ಪುಸ್ತಕದಲ್ಲಿ ನಿಮ್ಮ ಸಹಿ ಹಾಕಿ ಮೊಬೈಲ್ ಸಂಖ್ಯೆ ನಮೂದಿಸಿ. ಹೆಚ್ಚು ಜನರ ಸಹಿ ಮತ್ತು ಅಭಿಪ್ರಾಯ ಸಂಗ್ರಹಿಸಿದರೆ ನಮ್ಮ ಪಕ್ಷದಿಂದ ನನಗೆ ಟಿಕೆಟ್ ಸಿಗುತ್ತದೆ’ ಎನ್ನುವ ಬೇಡಿಕೆ ಇರಿಸಿದಾಗ, ಪ್ರಯಾಣಿಕರು ಕ್ಷಣಕಾಲ ಅಚ್ಚರಿಗೊಂಡರು.

ಹೀಗೆ ಮನವಿ ಮಾಡಿ ಬಸ್‌ನಲ್ಲಿ ಜನಾಭಿಪ್ರಾಯ ಸಂಗ್ರಹಿಸಿದವರು ಕಡೂರು ತಾಲ್ಲೂಕು ಗಡುಗನಹಳ್ಳಿಯ ಜಿ.ಟಿ.ಲೋಹಿತ್. ‘ನಾನು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ನಟ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಸಿದ್ಧಾಂತವನ್ನು ಮೆಚ್ಚಿ, ಆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈ ಬಾರಿ ಯುವಜನರಿಗೆ ಮತ್ತು ಹೊಸಮುಖಗಳು ಹಾಗೂ ಹೊಸಪಕ್ಷಕ್ಕೆ ಅವಕಾಶ ನೀಡುವ ಸಲುವಾಗಿ ಹಾಗೂ ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಪ್ರಜಾಕೀಯ ಪಕ್ಷವನ್ನು ನೀವೆಲ್ಲ ಬೆಂಬಲಿಸಿ‘ ಎಂದು ಕೋರಿದರು.

‘ಒಮ್ಮೆ ಶಾಸಕನಾಗಿ ಆಯ್ಕೆ ಆದರೆ ಬದುಕಿರುವವರೆಗೂ ಪ್ರತಿ ತಿಂಗಳೂ ಪಿಂಚಣಿ ಲಭಿಸುತ್ತದೆ. ಆದರೆ, ಗೆದ್ದವರು ಜನಸೇವಕರಾಗುವುದಿಲ್ಲ, ಜನ ನಾಯಕರಾಗುತ್ತಾರೆ. ನಾವು ಆಯ್ಕೆ ಮಾಡುವುದು ನಾಯಕರಾಗಲು ಅಲ್ಲ, ಜನರ ತೆರಿಗೆ ಹಣವನ್ನು ಸದ್ಬಳಕೆ ಮಾಡಿ ಅವರ ಆಶೋತ್ತರಗಳನ್ನು ಈಡೇರಿಸಲು. ಆದರೆ, ಇಂದು ಯಾವುದೇ ಶಾಸಕರು ಉತ್ತರದಾಯಿತ್ವ ತೋರ್ಪಡಿಸುವುದಿಲ್ಲ. ಕೇವಲ ಸ್ವಹಿತಕ್ಕಾಗಿ ರಾಜಕಾರಣವನ್ನು ವೃತ್ತಿಯಾಗಿಸಿಕೊಂಡಿದ್ದಾರೆ’ ಎಂದರು.

ADVERTISEMENT

ಬಸ್‍ನಲ್ಲಿದ್ದ ಪ್ರಯಾಣಿಕರು ಪುಸ್ತಕದಲ್ಲಿ ಸಹಿ ಹಾಕಿ ಶುಭ ಕೋರಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.