ADVERTISEMENT

ಪ್ರಜಾವಾಣಿ ದೀಪಾವಳಿ ವಿಶೇಷಾಂಕ: ಕಥೆ, ಕವನ ಸ್ಪರ್ಧೆ; ದಯಾನಂದ, ಲಕ್ಷ್ಮಣಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 7:48 IST
Last Updated 10 ಅಕ್ಟೋಬರ್ 2025, 7:48 IST
   

ಬೆಂಗಳೂರು: 2025ನೇ ಸಾಲಿನ ಪ್ರತಿಷ್ಠಿತ ‘ಪ್ರಜಾವಾಣಿ ದೀಪಾವಳಿ ಕಥೆ ಮತ್ತು ಕವನ ಸ್ಪರ್ಧೆ’ಯ ಫಲಿತಾಂಶ ಪ್ರಕಟವಾಗಿದೆ. ದಯಾನಂದ ಅವರ ಕಥೆ ‘ಹಾತೆಮರಿಗೆ ಹಾರುವುದ ಕಲಿಸಲು ರೆಕ್ಕೆಯೇ ಬೇಕಿಲ್ಲ’ ಹಾಗೂ ಡಾ.ಲಕ್ಷ್ಮಣ ವಿ.ಎ. ಅವರ ಕವನ ‘ಬಾಳಿಕೆ’ ಆಯಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದುಕೊಂಡಿವೆ.

ಕಥಾಸ್ಪರ್ಧೆಯಲ್ಲಿ ಪ್ರಸಾದ ಶೆಣೈ ಆರ್.ಕೆ. ಅವರ ‘ಗುಡು ಗುಡು ಗೊಮ್ಮಟದೇವ’ ಹಾಗೂ ಮಹಾದೇವ ಹಡಪದ ಅವರ ‘ತಾಯಿಪುರಾಣ’ ಕಥೆಗಳು ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನಕ್ಕೆ ಭಾಜನವಾಗಿವೆ. ಬಿ.ಶ್ರೀನಿವಾಸ ಅವರ ‘ಶವಪೆಟ್ಟಿಗೆ’, ಜಿ.ಸಿ. ರವಿ ಅವರ ‘ಕೈ ಹಿಡಿದು ನಡೆಸೆನ್ನ ತಂದೆ’, ಇಂದ್ರಕುಮಾರ್ ಎಚ್.ಬಿ. ಅವರ ‘ಸುತ್ತಿಹುದು ಸುಳಿಯಿಹುದು ಸತ್ತಿಹುದು ಸತಾಯಿಸುತಿಹುದು’, ಎಂ.ಎಸ್‌.ಶೇಖರ್‌ ಅವರ ‘ವರಹಾ ಪ್ರಸಂಗ’ ಹಾಗೂ ವಿಕಾಸ್ ನೇಗಿಲೋಣಿ ಅವರ ‘ಅಂತಿಮ ಯಾತ್ರೆ’ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಕವನ ಸ್ಪರ್ಧೆಯಲ್ಲಿ ಟಿ.ಎಚ್.ಲವಕುಮಾರ ಅವರ ‘ಹರಾಜು’ ಮತ್ತು ಪಿ.ನಂದಕುಮಾರ್‌ ಅವರ ‘ಕಲ್ಯಾಣ ಮುಡಿದಿದೆ ಮುತ್ತಿನುಂಗುರ ಸಾಲು’ ಕವನಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಸ್ಮಿತಾ ಅಮೃತರಾಜ್ ಸಂಪಾಜೆ ಅವರ ‘ಸ್ಥಿತಿ’, ದೀಪ್ತಿ ಭದ್ರಾವತಿ ಅವರ ‘ಒಂದು ಭೇಟಿ ಎಷ್ಟು ಕಷ್ಟ’, ರೇಣುಕಾ ರಮಾನಂದ ಅವರ ‘ತುಲಾಭಾರ’, ಸದಾಶಿವ ಸೊರಟೂರು ಅವರ ‘ವ್ಯಾಕರಣ ಸುಳ್ಳು ಹೇಳಬಾರದು’ ಹಾಗೂ ಶಂಕರ್ ಸಿಹಿಮೊಗ್ಗೆ ಅವರ ‘ಅರ್ಥ’ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ.

ADVERTISEMENT

ಸಾಹಿತಿ ಪ್ರೊ.ಸಬಿಹಾ ಭೂಮಿಗೌಡ ಹಾಗೂ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರು ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕವಿ ವಿಕ್ರಮ ವಿಸಾಜಿ ಹಾಗೂ ಕವಯತ್ರಿ ಗೀತಾ ವಸಂತ ಅವರು ಕವನ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಬಹುಮಾನದ ವಿವರ
ಕಥಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಕಥೆಗಳಿಗೆ ಕ್ರಮವಾಗಿ ₹20 ಸಾವಿರ, ₹15 ಸಾವಿರ ಹಾಗೂ ₹10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಲಭಿಸಲಿದೆ. ಕವನ ಸ್ಪರ್ಧೆ ಮೊದಲ ಮೂರು ಸ್ಥಾನ ಪಡೆದ ಕವನಗಳಿಗೆ ಕ್ರಮವಾಗಿ ₹5,000, ₹3,000 ಹಾಗೂ ₹2,500 ನಗದು ಹಾಗೂ ಪ್ರಶಸ್ತಿ ಪತ್ರ ದೊರೆಯಲಿದೆ.
ತೀರ್ಪುಗಾರರ ಟಿಪ್ಪಣಿ‌
ಇಲ್ಲಿನ ಕಥೆಗಳ ಓದು, ಸಮಕಾಲೀನ ಸಮಾಜದ ವಿದ್ಯಮಾನಗಳಿಗೆ ನಮ್ಮನ್ನು ಮುಖಾಮುಖಿಯಾಗಿಸುತ್ತ, ಆ ಬೆಳವಣಿಗೆಗಳಲ್ಲಿ ನಮ್ಮ ಜವಾಬ್ದಾರಿಯನ್ನು ಪ್ರಶ್ನಿಸುವಂತೆ, ಸಾಮಾಜಿಕ ಸ್ವಾಸ್ಥ್ಯಕ್ಕೆ ನಮ್ಮ ಕೊಡುಗೆ ಏನಾಗಿರಬೇಕೆಂಬ ವಿಚಾರದಲ್ಲಿ ಸೂಕ್ಷ್ಮಜ್ಞರನ್ನಾಗಿಸುತ್ತದೆ
– ಪ್ರೊ.ಸಬಿಹಾ ಭೂಮಿಗೌಡ, ಕಥಾ ಸ್ಪರ್ಧೆ ವಿಭಾಗ
ಹೆಚ್ಚು ಕಡಿಮೆ ಒಂದು ದಶಕದಿಂದೀಚೆಗೆ ಕನ್ನಡದಲ್ಲಿ ಕಥೆ ಕಾದಂಬರಿಗಳ ಸುಗ್ಗಿಯನ್ನೇ ಕಾಣುತ್ತಿದ್ದೇವೆ. ಹೊಸ ತಲೆಮಾರಿನ ಕಥನಕಾರರು ಕಥೆ, ಕಾದಂಬರಿ ಪ್ರಕಾರಗಳ ದಿಗಂತವನ್ನು ಅಚ್ಚರಿಯೆನಿಸುವಂತೆ ವಿಸ್ತರಿಸುತ್ತಿದ್ದಾರೆ.
– ಅಗ್ರಹಾರ ಕೃಷ್ಣಮೂರ್ತಿ, ಕಥಾ ಸ್ಪರ್ಧೆ ವಿಭಾಗ
ಕೆಲವು ಕವಿತೆಗಳ ಒಳ ಬಿಕ್ಕುಗಳು, ಹೇಳಿಕೊಳ್ಳಲಾರದ ಸಂಕಟಗಳು, ಸಮಾಜದ ಒಳರಚನೆಗಳಲ್ಲಿ ಅಡಗಿರುವ ಹಿಂಸೆಯ ನೆಲೆಗಳು ಸೂಕ್ಷ್ಮವಾದ ಹೊಸ ನುಡಿಗಟ್ಟಿನಲ್ಲಿ ಕಾವ್ಯದ ಅನುಭವವಾಗಿ ರೂಪುಗೊಂಡಿದ್ದವು. ಕೊನೆಗೆ ಅವು ಪುಟಗಳಲ್ಲಿ ಮುಗಿದರೂ ಮನಸ್ಸಿನಲ್ಲಿ ಬೆಳೆಯತೊಡಗಿದವು.
– ವಿಕ್ರಮ ವಿಸಾಜಿ, ಕವನ ಸ್ಪರ್ಧೆ ವಿಭಾಗ
ಇತ್ತೀಚೆಗೆ ಬಹುಮಾನ ಗೆಲ್ಲುವ ಹುಕಿಗೆ ಬಿದ್ದಂತ ಬರವಣಿಗೆಗಳು ಹೆಚ್ಚುತ್ತಿವೆ. ಹೀಗೆ ಬರೆದರೆ ಗಮನಸೆಳೆಯಬಹುದೆಂಬ ‘ಪ್ಯಾಟರ್ನ್’ ಒಂದನ್ನು ರೂಪಿಸಿಕೊಳ್ಳಲಾಗುತ್ತಿದೆ. ಆ ಸವಕಲು ಜಾಡಿನಲ್ಲಿ ನಡೆಯುವ ಕಾವ್ಯ ಜೀವಾಂತಃಕರಣವನ್ನು ಸೋಕದೇ ರೆಡಿಮೇಡ್ ಹೂವಿನಂತೆ ಕಂಗೊಳಿಸುತ್ತದೆ.
– ಗೀತಾ ವಸಂತ, ಕವನ ಸ್ಪರ್ಧೆ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.