ADVERTISEMENT

ಪ್ರಜಾವಾಣಿ ವಿಶೇಷ | ಎತ್ತಿನಹೊಳೆ ಕಾಮಗಾರಿಗೆ ಗ್ರಹಣ

ಒಂಬತ್ತು ತಿಂಗಳಿಂದ ಬಿಡಿಗಾಸೂ ಇಲ್ಲ l ₹3,600 ಕೋಟಿ ಬಿಲ್‌ ಬಾಕಿ l ಕೆಲಸ ಬಹುತೇಕ ಸ್ಥಗಿತ

ವಿ.ಎಸ್.ಸುಬ್ರಹ್ಮಣ್ಯ
Published 13 ಫೆಬ್ರುವರಿ 2022, 20:10 IST
Last Updated 13 ಫೆಬ್ರುವರಿ 2022, 20:10 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು: ಬಯಲುಸೀಮೆಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳಿಗೆ ಒಂಬತ್ತು ತಿಂಗಳಿಂದ ಬಿಡಿಗಾಸೂ ಬಿಡುಗಡೆಯಾಗಿಲ್ಲ. ₹3,600 ಕೋಟಿಗೂ ಹೆಚ್ಚು ಮೊತ್ತದ ಬಿಲ್‌ ಬಾಕಿ ಉಳಿದಿದ್ದು, ಶೇ 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ವಿಶ್ವೇಶ್ವರಯ್ಯ ಜಲ ನಿಗಮ (ವಿಜೆಎನ್‌ಎಲ್‌) ಆರು ತಿಂಗಳ ಹಿಂದೆ ಸಲ್ಲಿಸಿರುವ ₹ 2,083.23 ಕೋಟಿ ಮೊತ್ತದ ಬಿಲ್‌ಗಳು ಹಣಕಾಸು ಇಲಾಖೆಯ ಮುಂದೆ ಬಾಕಿ ಉಳಿದಿವೆ. ಇನ್ನೂ ₹1,500 ಕೋಟಿ ಮೊತ್ತದ ಬಿಲ್‌ ಬರೆಯಬೇಕಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಯೋಜನೆಯಡಿ ಎರಡು ಹಂತಗಳಲ್ಲಿ 43 ಪ್ಯಾಕೇಜ್‌ಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 42 ಪ್ಯಾಕೇಜ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಗಿದಿರುವ ಕೆಲಸಕ್ಕೆ ಬಿಲ್‌ ಸಲ್ಲಿಸಿ ಹಲವು ತಿಂಗಳುಗಳು ಕಳೆದರೂ ಹಣ ಪಾವತಿಯಾಗಿಲ್ಲ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ಬಹುತೇಕ ಗುತ್ತಿಗೆದಾರರು, ಕಾಮಗಾರಿಗಳ ಸ್ಥಳಗಳಿಂದ ಕಾರ್ಮಿಕರನ್ನು ಹೊರಕಳುಹಿಸಿದ್ದಾರೆ.

ADVERTISEMENT

ಕಾಲುವೆ ನಿರ್ಮಾಣ, ವಿತರಣಾ ತೊಟ್ಟಿಗಳ ನಿರ್ಮಾಣ, ಪಂಪ್‌ಹೌಸ್‌ ನಿರ್ಮಾಣ, ರೈಸಿಂಗ್‌ ವಾಲ್‌ ನಿರ್ಮಾಣ, ಗುರುತ್ವ ಕಾಲುವೆ ನಿರ್ಮಾಣ, ಸುರಂಗ ಮಾರ್ಗಗಳ ನಿರ್ಮಾಣ, ಅಡ್ಡ ಮೋರಿಗಳ ನಿರ್ಮಾಣ ಸೇರಿದಂತೆ ಹಲವು ಬಗೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವು ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದರೆ, ಹಲವು ಕಾಮಗಾರಿಗಳು ಅರ್ಧಕ್ಕಿಂತ ಹೆಚ್ಚು ಮುಗಿದಿವೆ. ಬಿಲ್‌ ಪಾವತಿಯಲ್ಲಿ ವಿಳಂಬವಾಗುತ್ತಿರುವುದರಿಂದ ಕೆಲಸ ಮುಂದುವರಿಸಲು ಗುತ್ತಿಗೆದಾರರು ಆಸಕ್ತಿ ತೋರುತ್ತಿಲ್ಲ.

ಏಳು ಜಿಲ್ಲೆಗಳ 29 ತಾಲ್ಲೂಕುಗಳ ವ್ಯಾಪ್ತಿಯಲ್ಲಿ 38 ಪಟ್ಟಣಗಳು ಮತ್ತು 6,657 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ₹ 12,912.36 ಕೋಟಿ ವೆಚ್ಚದ ಯೋಜನೆಯನ್ನು ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಇತ್ತೀಚೆಗೆ ಗಡುವು ನೀಡಿದ್ದರು. ಆದರೆ, ಹಣ ಬಿಡುಗಡೆಯಲ್ಲಿ ಆಗಿರುವ ವಿಳಂಬದಿಂದ ಕಾಮಗಾರಿ ಬೇಗ ಪೂರ್ಣಗೊಳ್ಳುವ ಸಾಧ್ಯತೆ ಕಾಣಿಸುತ್ತಿಲ್ಲ ಎಂದು ವಿಜೆಎನ್‌ಎಲ್‌ ಹಿರಿಯ ಅಧಿಕಾರಿ
ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಲ್‌ ಬರೆಸುವುದಕ್ಕೂ ಹಿಂದೇಟು:
ಆರು ತಿಂಗಳ ಹಿಂದೆ ಬಿಲ್‌ಗಳನ್ನು ಸಲ್ಲಿಸಿದ ನಂತರ ₹ 1,500 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳು ‍ಪೂರ್ಣಗೊಂಡಿವೆ. ಆದರೆ, ಬಿಲ್‌ ಬರೆದ ತಕ್ಷಣವೇ ಶೇ 12ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಬೇಕಿದೆ. ₹ 180 ಕೋಟಿ ಜಿಎಸ್‌ಟಿ ಪಾವತಿಸಿದರೂ ತ್ವರಿತವಾಗಿ ಬಿಲ್‌ ಪಾವತಿಯಾಗುವ ಭರವಸೆ ಇಲ್ಲದ ಕಾರಣ ಬಿಲ್‌ ಬರೆದು, ಸಲ್ಲಿಸದಂತೆ ಗುತ್ತಿಗೆದಾರರು ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

‘ಕಾಮಗಾರಿ ಮುಗಿದಿರುವ ಪ್ರಕರಣಗಳಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ₹2,083.23 ಕೋಟಿ ಬಿಡುಗಡೆಗೆ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಿ ಆರು ತಿಂಗಳಾಗಿದೆ. ಇದುವರೆಗೂ ಅನುದಾನ ಬಿಡುಗಡೆ
ಯಾಗಿಲ್ಲ’ ಎಂದು ವಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣರಾವ್‌ ಪೇಶ್ವೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೇವಲ ₹ 280 ಕೋಟಿ ಬಿಡುಗಡೆ?:
ಬೃಹತ್‌ ಮೊತ್ತದ ಬಿಲ್‌ಗಳು ಬಾಕಿ ಇದ್ದರೂ ಎತ್ತಿನಹೊಳೆ ಯೋಜನಾ ವಿಭಾಗಕ್ಕೆ ಕೇವಲ ₹ 280 ಕೋಟಿ ಬಿಡುಗಡೆಗೆ ಹಣಕಾಸು ಇಲಾಖೆ ಸಮ್ಮತಿಸಿದೆ. ಒಂದೆರಡು ದಿನಗಳಲ್ಲಿ ನಿಗಮಕ್ಕೆ ಅನುದಾನ ಬಿಡುಗಡೆಯಾಗಲಿದ್ದು, ಗುತ್ತಿಗೆದಾರರ ನಡುವೆ ಹಂಚಿಕೆಗೆ ಸೂತ್ರ ರೂಪಿಸಲು ನಿಗಮದ ಅಧಿಕಾರಿಗಳು ಪ್ರಯಾಸಪಡುತ್ತಿದ್ದಾರೆ.

ಬೇಕಿದೆ ₹ 11,428 ಕೋಟಿ:

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ಈಗ ಬಾಕಿ ಇರುವ ಬಿಲ್‌ ಮೊತ್ತವೂ ಸೇರಿದಂತೆ ಇನ್ನೂ ₹ 11,428.54 ಕೋಟಿ ಅನುದಾನ ಅಗತ್ಯವಿದೆ ಎಂಬ ಮಾಹಿತಿಯನ್ನು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದ್ದಾರೆ.

ಯೋಜನೆಗೆ ಅಗತ್ಯವಿರುವ ಜಮೀನು ಸ್ವಾಧೀನಪಡಿಸಿಕೊಳ್ಳಲು ₹ 1,301.06 ಕೋಟಿ, ಬಿಲ್‌ ಬರೆಯಬೇಕಿರುವುದು ಮತ್ತು ಬಾಕಿ ಇರುವ ಕಾಮಗಾರಿಗಳಿಗೆ ಒಟ್ಟು ₹ 8,044.25 ಕೋಟಿ ಹಾಗೂ ಆರು ತಿಂಗಳ ಹಿಂದೆ ಸಲ್ಲಿಸಿರುವ ಬಿಲ್‌ ಬಾಬ್ತು ₹ 2,083.23 ಕೋಟಿ ಅನುದಾನದ ಅಗತ್ಯವಿದೆ ಎಂದು ವಿಜೆಎನ್‌ಎಲ್‌ ಅಧಿಕಾರಿಗಳು ಬೇಡಿಕೆ ಮಂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಮಿಕರ ಶೆಡ್‌ಗಳೂ ಖಾಲಿ, ಖಾಲಿ

ಎತ್ತಿನಹೊಳೆ ಯೋಜನೆಯ ಕಾಮಗಾರಿಗಳ ಸ್ಥಳಗಳಲ್ಲಿ ಶೆಡ್‌ಗಳನ್ನು ನಿರ್ಮಿಸಿ ಕಾರ್ಮಿಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈಗ ಬಹುತೇಕ ಶೆಡ್‌ಗಳು ಖಾಲಿಯಾಗಿವೆ. ಕೆಲವೆಡೆ ಬೆರಳೆಣಿಕೆಯ ಭದ್ರತಾ ಸಿಬ್ಬಂದಿ ಮಾತ್ರ ಇದ್ದಾರೆ. ಕಾರ್ಮಿಕರನ್ನು ವಾಪಸ್‌ ಕರೆಸಿ, ಕೆಲಸ ಪುನರಾರಂಭಿಸುವಂತೆ ಗುತ್ತಿಗೆದಾರರನ್ನು ಮನವೊಲಿಸಲು ವಿಜೆಎನ್‌ಎಲ್‌ ಅಧಿಕಾರಿಗಳು ನಡೆಸಿದ ಪ್ರಯತ್ನವೂ ಫಲ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.