ADVERTISEMENT

ದೇವಾಲಯಗಳ ಸ್ವಾಯತ್ತತೆಗೆ ತೊಂದರೆ ಎಲ್ಲಿದೆ: ಸಂವಾದದಲ್ಲಿ ಅತಿಥಿಗಳ ಅಭಿಪ್ರಾಯ

ಪ್ರಜಾವಾಣಿ ‘ಫೇಸ್‌ ಬುಕ್‌’ ಸಂವಾದ

ಪ್ರಜಾವಾಣಿ ವಿಶೇಷ
Published 3 ಜನವರಿ 2022, 18:07 IST
Last Updated 3 ಜನವರಿ 2022, 18:07 IST
   

ಹುಬ್ಬಳ್ಳಿ: ‘ದೇವಸ್ಥಾನಗಳು ಸಾರ್ವಜನಿಕ ಆಸ್ತಿಯಲ್ಲ; ಅವು ಶ್ರದ್ಧಾ ಕೇಂದ್ರಗಳು. ಆದಾಯ ಮತ್ತು ದೇವಸ್ಥಾನ ನಿರ್ವಹಣೆಯಲ್ಲಿ ಪಾರದರ್ಶಕತೆ ಕಂಡುಕೊಳ್ಳಲು ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ತರಲುಸರ್ಕಾರ ಯೋಜನೆ ರೂಪಿಸುವುದಾದರೆ ಅದಕ್ಕೆ ಯಾರ ಅಭ್ಯಂತರವೂ ಇಲ್ಲ’. ‘ಈಗಾಗಲೇ ಸ್ವಾತಂತ್ರ್ಯ ಇದೆ. ಸ್ವಾಯತ್ತತೆ ನೀಡುವುದು ರಾಜಕೀಯ ನಾಯಕರ ಹಿಂಬಾಲಕರಿಗೆ ಸ್ವಾತಂತ್ರ್ಯ, ಹಣ ನೀಡುವ ಹುನ್ನಾರದಂತೆ ಕಾಣುತ್ತಿದೆ’.

–ಇವು, ‘ಪ್ರಜಾವಾಣಿ’ ಸೋಮವಾರ ಆಯೋಜಿಸಿದ್ದ ‘ದೇವಸ್ಥಾನಗಳಿಗೆ ಸ್ವಾತಂತ್ರ್ಯ ಬೇಕೆ? ಬೇಡವೆ?’ ವಿಷಯ ಕುರಿತ ಫೇಸ್‌ಬುಕ್‌ ಲೈವ್‌ ಸಂವಾದದಲ್ಲಿ ಅತಿಥಿಗಳಿಂದ ವ್ಯಕ್ತವಾದ ಪರ–ವಿರೋಧದ ಅಭಿಪ್ರಾಯ.

ಸಂವಾದದಲ್ಲಿ ಸಂಶೋಧಕಿ ಶಕುಂತಲಾ ಅಯ್ಯರ್‌, ಬರಹಗಾರ ಬಂಜಗೆರೆ ಜಯಪ್ರಕಾಶ ಹಾಗೂ ಸಂಶೋಧಕ ದೇವರಕೊಂಡಾ ರೆಡ್ಡಿ ಪಾಲ್ಗೊಂಡಿದ್ದರು.

ADVERTISEMENT

ಸರ್ಕಾರ ಮೂಗು ತೂರಿಸುವುದು ವಿಷಾದಕರ

ದೇವಸ್ಥಾನಗಳು ಸಾರ್ವಜನಿಕ ಆಸ್ತಿಯಲ್ಲ; ಅವು ಶ್ರದ್ಧಾ ಕೇಂದ್ರಗಳು; ಸಾಂಸ್ಕೃತಿಕ ಸಂಸ್ಥೆಗಳು. ದೇವಸ್ಥಾನದ ಪ್ರತಿ ವಿದ್ಯಮಾನದಲ್ಲೂ ಸರ್ಕಾರದ ಸಮ್ಮತಿ ಇರಬೇಕು ಎನ್ನುವುದನ್ನು ಹಿಂದೂ ಶ್ರದ್ಧಾಳುಗಳು ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಮೂಗು ತೂರಿಸುವುದು ವಿಷಾದಕರ.

ಆದಾಯ ಮತ್ತು ದೇವಸ್ಥಾನ ನಿರ್ವಹಣೆಯಲ್ಲಿ ಪಾರದರ್ಶಕತೆ ಕಂಡುಕೊಳ್ಳಲು ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ಸರ್ಕಾರ ತರಲು ಯೋಜನೆ ರೂಪಿಸುವುದಾದರೆ, ಅದಕ್ಕೆ ಯಾರ ಅಭ್ಯಂತರವೂ ಇಲ್ಲ. ಸರ್ಕಾರಕ್ಕೆ ಧರ್ಮವನ್ನು ಬೆಳೆಸಲು ಸಾಧ್ಯವಿಲ್ಲ. ಹೀಗಾಗಿ, ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಬಾರದು. ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು. ದೇವಸ್ಥಾನಗಳನ್ನು ಕೇವಲ ಆದಾಯಮೂಲಗಳಾಗಿ ಮಾತ್ರ ನೋಡಬಾರದು. ಈ ದೃಷ್ಟಿಕೋನ ಬದಲಾಗಬೇಕು.ಹಿಂದೂ ದೇವಾಲಯಗಳನ್ನು ಮಾತ್ರ ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದೀರಿ. ಇತರರಿಗೆ ತಂದಿಲ್ಲ ಎಂದು ಪ್ರಶ್ನೆ ಮಾಡುವುದಿಲ್ಲ. ನಮ್ಮನ್ನೂ ಸ್ವತಂತ್ರವಾಗಿರಲು ಬಿಡಿ.

– ಶಕುಂತಲಾ ಅಯ್ಯರ್‌,ಸಂಶೋಧಕಿ

ಪ್ರಭಾವಶಾಲಿ ಸಂಪ್ರದಾಯಕ್ಕೆ ಮಣೆ ಹಾಕುವ ಸಾಧ್ಯತೆ

ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡುವುದರಿಂದ ಅವುಗಳ ನಿರ್ವಹಣೆ ಕೆಲವು ನಿರ್ದಿಷ್ಟ ಜಾತಿಗಳ ನಿಯಂತ್ರಣಕ್ಕೆ ಒಳ‍‍ಪಡುವ ಸಾಧ್ಯತೆ ಇದೆ. ಒಮ್ಮೆ ಖಾಸಗಿ ಆಡಳಿತಕ್ಕೆ ಒಳಪಟ್ಟರೆ ಎಲ್ಲರ ಪ್ರವೇಶಕ್ಕೆಮುಕ್ತವಾಗದಿರಬಹುದು. ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವರನ್ನು ದೇವಸ್ಥಾನದಿಂದ ಹೊರಗಿಡುವ ಅಪಾಯವೂ ಇದೆ. ಆಯಾ ಪ್ರದೇಶದ ಪ್ರಭಾವಿ ಭಕ್ತರ ನಿಯಂತ್ರಣಕ್ಕೆ ಬಿಡುವ, ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಭಾವಶಾಲಿ ಸಂಪ್ರದಾಯಕ್ಕೆ ಮಣೆ ಹಾಕುವ ಸಾಧ್ಯತೆಯನ್ನೂ ಅಂದಾಜಿಸಬಹುದು.

ಸ್ವಾಯತ್ತತೆ ಎನ್ನುವುದು ರಾಜಕೀಯ ನಾಯಕರ ಹಿಂಬಾಲಕರಿಗೆ ಸ್ವಾತಂತ್ರ್ಯ, ಹಣ ನೀಡಿ ರಾಜಕೀಯಕರಣಕ್ಕೆ ಅವಕಾಶ ಮಾಡಿಕೊಡುವ ಹುನ್ನಾರದಂತೆ ಕಾಣುತ್ತಿದೆ. ಪ್ರಸ್ತುತ ದೇವಸ್ಥಾನಗಳಲ್ಲಿ ಧಾರ್ಮಿಕ ಆಚರಣೆ ಮತ್ತು ಸಂಪ್ರದಾಯಕ್ಕೆ ಯಾವುದೇ ಲೋಪ ಎದುರಾಗಿಲ್ಲ. ಎಲ್ಲವೂ ಶಾಸ್ತ್ರೋಕ್ತವಾಗಿ ನಡೆಯುತ್ತಿದೆ. ಆರ್ಚಕರು ಸೇರಿದಂತೆ ವಿವಿಧ ನೇಮಕಾತಿಗಳಲ್ಲಿ ಈಗ ತಾರತಮ್ಯವೂ ಆಗುತ್ತಿಲ್ಲ. ಈಗ ಇರುವಂತೆ ಮುಜರಾಯಿ ಇಲಾಖೆಯ ವ್ಯವಸ್ಥೆಯೇ ಇರಲಿ.

– ಬಂಜಗೆರೆ ಜಯಪ್ರಕಾಶ,ಬರಹಗಾರ

ಆಡಳಿತ ಹಸ್ತಕ್ಷೇಪದಿಂದ ದೂರ...

ರಾಜರ ಕಾಲದಿಂದಲೂ ದೇವಸ್ಥಾನಗಳು ಆಡಳಿತದ ಹಸ್ತಕ್ಷೇಪದಿಂದ ದೂರವೇ ಉಳಿದಿವೆ. ರಾಜರು ದೇವಸ್ಥಾನದ ಸಾಮಾಜಿಕ ಕಾರ್ಯಗಳನ್ನು ಪರಿಶೀಲಿಸಿ ದೇಣಿಗೆ ನೀಡುತ್ತಿದ್ದರು. ಆ ಕಾಲದಲ್ಲಿ ಕೊಡುಗೆ ಇತ್ತು, ಆದರೆ ರಾಜರ ನಿಯಂತ್ರಣ ಇರಲಿಲ್ಲ.

ದೇವಸ್ಥಾನ ಕೇವಲ ಪೂಜಾ ಕೇಂದ್ರವಾಗಿರಲಿಲ್ಲ. ಅಂದು ವಿದ್ಯಾದಾನ, ಅನ್ನದಾನ, ವೈದ್ಯಕೀಯ ಸೇವೆ, ಸಾಂಸ್ಕೃತಿಕ ಸಂಘಟನೆ, ನಿರಾಶ್ರಿತರಿಗೆ ಆಶ್ರಯ ತಾಣ, ವಸ್ತ್ರದಾನ ಮತ್ತು ನ್ಯಾಯದಾನದ ಕೇಂದ್ರವಾಗಿತ್ತು. ಈಗ ಮೂರ್ತಿಪೂಜಾ ಕೇಂದ್ರಗಳನ್ನಾಗಿ ಮಾತ್ರ ನೋಡುತ್ತಿದ್ದೇವೆ. ಈ ಹಿಂದೆ ದೇವಸ್ಥಾನಗಳು ದೊಡ್ಡ ಸಮುದಾಯವನ್ನು ಸಲಹುತ್ತಿದ್ದವು. ಈ ಹಿಂದೆ ದೇವಸ್ಥಾನಕ್ಕೆ ಬರುವ ಆದಾಯ ಸಾರ್ವಜನಿಕರಿಗೆ ತಿಳಿಯುತ್ತಿತ್ತು. ಗುಪ್ತದಾನ ಎನ್ನುವುದು ಇರುತ್ತಿರಲಿಲ್ಲ. ಈಗ ಕೆಲವು ನಿರ್ದಿಷ್ಟ ದೇವಸ್ಥಾನಗಳು ಮಾತ್ರ ದೇವಸ್ಥಾನದ ಆದಾಯದ ಬಗ್ಗೆ ಪಾರದರ್ಶಕತೆ ಕಾಪಾಡಿಕೊಂಡಿವೆ.

– ದೇವರಕೊಂಡಾ ರೆಡ್ಡಿ,ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.