ADVERTISEMENT

ನ್ಯಾಯಾಧೀಶರ ವಿರುದ್ಧವೇ ಆರೋಪ: ಪ್ರಜ್ವಲ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 15:22 IST
Last Updated 24 ಸೆಪ್ಟೆಂಬರ್ 2025, 15:22 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮಹಿಳೆ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಸೆಷನ್ಸ್‌ ಕೋರ್ಟ್‌ನಲ್ಲಿ ನಡೆಯುತ್ತಿರುವ ನನ್ನ ವಿರುದ್ಧದ ಇನ್ನೆರಡು ಕ್ರಿಮಿನಲ್‌ ಪ್ರಕರಣಗಳನ್ನು ಮತ್ತೊಂದು ಸೆಷನ್ಸ್‌ ಕೋರ್ಟ್‌ಗೆ ವರ್ಗಾಯಿಸಬೇಕು’ ಎಂದು ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ನ್ಯಾಯಿಕ ಪ್ರಕ್ರಿಯೆಯಲ್ಲಿ ನಿಮಗೆ ಏನಾದರೂ ಆಕ್ಷೇಪಗಳು ಎದುರಾಗಿದ್ದರೆ ಅಂತಹ ಅಂಶಗಳನ್ನು ನ್ಯಾಯಿಕ ಪ್ರಕ್ರಿಯೆಯ ಮುಖಾಂತರವೇ ಪ್ರಶ್ನಿಸಿಕೊಳ್ಳಿ’ ಎಂದು ಕಾರಣ ನೀಡಿದೆ.

‘ಸೆಷನ್ಸ್‌ ನ್ಯಾಯಾಲಯ ದಿನನಿತ್ಯದ ಆಧಾರದಲ್ಲಿ ವಿಚಾರಣೆ ನಡೆಸುತ್ತಿದೆ. ಈ ಪ್ರಕ್ರಿಯೆಯಲ್ಲಿ ವಿಚಾರಣೆ ಮುಂದೂಡಬೇಕೆಂಬ ನಿಮ್ಮ ಮನವಿಗಳನ್ನು ನ್ಯಾಯಾಧೀಶರು ಸಕಾರಣದಿಂದಲೇ ತಿರಸ್ಕರಿಸಿರಬಹುದು. ಈ ಮೊದಲಿನ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ನೀಡಲಾದ ತೀರ್ಪಿನಲ್ಲಿ ಕೆಲ ಅವಲೋಕನಗಳೂ ನಿಮಗೆ ಕಠಿಣ ಎಂದೆನಿಸಿರಬಹುದು. ಆದರೆ, ಇದನ್ನೇ ನ್ಯಾಯಾಧೀಶರ ನಡೆ ಪಕ್ಷಪಾತದಿಂದ ಕೂಡಿದೆ ಎಂದು ಅರ್ಥೈಸಲಾಗದು’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

‘ಅರ್ಜಿದಾರರು ಪ್ರಕರಣದ ವಿಚಾರಣೆ ವಿಳಂಬ ಮಾಡಲು ಯತ್ನಿಸಿದ್ದು, ಇದನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. ಇದನ್ನೇ ವರ್ಗಾವಣೆಗೆ ಆಧಾರ ಎನ್ನುವುದಾದರೆ, ಬಹುತೇಕ ಎಲ್ಲ ಕ್ರಿಮಿನಲ್ ಪ್ರಕರಣಗಳಲ್ಲೂ ಇಂತಹ ಅರ್ಜಿಗಳು ಬರಲಾರಂಭಿಸುತ್ತವೆ. ಇಂತಹುದಕ್ಕೆಲ್ಲಾ ನ್ಯಾಯಾಲಯ ಅನುಮತಿ ನೀಡಲಾಗುವುದಿಲ್ಲ’ ಎಂಬ ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಮೊದಲು ಪ್ರಜ್ವಲ್‌ ಸಲ್ಲಿಸಿದ್ದ ಇದೇ ಮನವಿಯ ಅರ್ಜಿಗಳನ್ನು ಬೆಂಗಳೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಇದೇ 20ರಂದು ತಿರಸ್ಕರಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಜ್ವಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ರವಿವರ್ಮ ಕುಮಾರ್‌ ಮತ್ತು ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್.ಜಗದೀಶ್‌ ವಾದ ಮಂಡಿಸಿದರು.

ಮನವಿ ಏನಿತ್ತು?:

 ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಈಗಾಗಲೇ ನನ್ನ ವಿರುದ್ಧ ಒಂದು ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ಪೂರ್ವಗ್ರಹ ಭಾವನೆ ಹೊಂದಿರುವ ಅಂಶಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಅವರ ಅನ್ಯಾಯದ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 408ರ ಅಡಿಯಲ್ಲಿ ಸದ್ಯ ನಡೆಯುತ್ತಿರುವ ಮತ್ತೆರಡು ಪ್ರಕರಣಗಳ ವಿಚಾರಣೆಯನ್ನು ನಗರದ ಮತ್ತೊಂದು ಸೆಷನ್ಸ್‌ ಕೋರ್ಟ್‌ಗೆ ವರ್ಗಾವಣೆ ಮಾಡಲು ಆದೇಶಿಸಬೇಕು’ ಎಂದು ಪ್ರಜ್ವಲ್‌ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.