ADVERTISEMENT

ಅತ್ಯಾಚಾರ ಆರೋಪದ ಕ್ರಿಮಿನಲ್‌ ಪ್ರಕರಣ: ಕೋರ್ಟ್‌ ಬದಲಾಯಿಸಲು ಪ್ರಜ್ವಲ್‌ ಮನವಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 0:30 IST
Last Updated 12 ಸೆಪ್ಟೆಂಬರ್ 2025, 0:30 IST
ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ   

ಬೆಂಗಳೂರು: ‘ಜನಪ್ರತಿನಿಧಿಗಳ ಸೆಷನ್ಸ್‌ ಕೋರ್ಟ್‌ನಲ್ಲಿ ನಡೆಯುತ್ತಿರುವ ನನ್ನ ವಿರುದ್ಧದ ಅತ್ಯಾಚಾರ ಆರೋಪದ ಕ್ರಿಮಿನಲ್‌ ಪ್ರಕರಣಗಳನ್ನು ಮತ್ತೊಂದು ಸೆಷನ್ಸ್‌ ಕೋರ್ಟ್‌ಗೆ ವರ್ಗಾಯಿಸಬೇಕು’ ಎಂದು ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ಗಳ ಪ್ರಧಾನ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ.

‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಈಗಾಗಲೇ ನನ್ನ ವಿರುದ್ಧ ಒಂದು ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ನನ್ನ ವಿರುದ್ಧ ಪೂರ್ವಗ್ರಹ ಭಾವನೆ ಹೊಂದಿರುವ ಅಂಶಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಅವರ ಅನ್ಯಾಯದ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 408ರ ಅಡಿಯಲ್ಲಿ ಸದ್ಯ ನಡೆಯುತ್ತಿರುವ ಮತ್ತೆರಡು ಪ್ರಕರಣಗಳ ವಿಚಾರಣೆಯನ್ನು ನಗರದ ಮತ್ತೊಂದು ಸೆಷನ್ಸ್‌ ಕೋರ್ಟ್‌ಗೆ ವರ್ಗಾವಣೆ ಮಾಡಲು ಆದೇಶಿಸಬೇಕು’ ಎಂದು ಕೋರಿದ್ದಾರೆ.

ಪ್ರಜ್ವಲ್‌ ರೇವಣ್ಣ ಪರ ಹೈಕೋರ್ಟ್ ವಕೀಲ ಬಿ.ಎಂ.ಗಿರೀಶ್‌ ಕುಮಾರ್ ಈ ಕುರಿತಾದ ಮನವಿಯನ್ನು ಗುರುವಾರ ಸಲ್ಲಿಸಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರು ಮನೆಗೆಲಸದ ಮಧ್ಯವಯಸ್ಕ ಮಹಿಳೆಯ ಮೇಲೆ ಪದೆ ಪದೇ ಅತ್ಯಾಚಾರ ಎಸಗಿದ ದುಷ್ಕೃತ್ಯದಲ್ಲಿ ಅಪರಾಧಿಯಾಗಿ ಸದ್ಯ ಕಠಿಣ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.