ADVERTISEMENT

ಪ್ರಜ್ವಲ್‌ ರೇವಣ್ಣಗೆ ಜೀವಮಾನ ಪರ್ಯಂತ ಕಠಿಣ ಜೈಲು: 480 ಪುಟಗಳ ಸುದೀರ್ಘ ತೀರ್ಪು

ಬಿ.ಎಸ್.ಷಣ್ಮುಖಪ್ಪ
Published 2 ಆಗಸ್ಟ್ 2025, 23:38 IST
Last Updated 2 ಆಗಸ್ಟ್ 2025, 23:38 IST
<div class="paragraphs"><p>ಪ್ರಜ್ವಲ್ ರೇವಣ್ಣ</p></div>

ಪ್ರಜ್ವಲ್ ರೇವಣ್ಣ

   

ಬೆಂಗಳೂರು: ಮನೆಗೆಲಸದ ಮಧ್ಯವಯಸ್ಕ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ದುಷ್ಕೃತ್ಯದಲ್ಲಿ ಅಪರಾಧಿ ಎಂದು ನಿರ್ಣಯಿಸಲಾಗಿದ್ದ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ (34) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿಯ (ಜೀವಮಾನ ಪರ್ಯಂತ) ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಈ ಕುರಿತಾದ ತೀರ್ಪನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಶನಿವಾರ ಸಂಜೆ 4.10ಕ್ಕೆ ತೆರೆದ ನ್ಯಾಯಾಲಯದಲ್ಲಿ ಘೋಷಿಸಿದರು.

ADVERTISEMENT

‘ಅಪರಾಧಿಯು ಜೈಲು ಶಿಕ್ಷೆ ಅನುಭವಿಸುವುದರ ಜೊತೆಗೆ ₹11.25 ಲಕ್ಷ ಪರಿಹಾರವನ್ನು ಸಂತ್ರಸ್ತೆಗೆ ಮತ್ತು ₹35 ಸಾವಿರ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು’ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಜ್ವಲ್‌ಗೆ ವಿವಿಧ ಅಪರಾಧಿಕ ಕಲಂಗಳ ಅಡಿಯಲ್ಲಿ ನ್ಯಾಯಾಧೀಶರು ಕಠಿಣವಾದ ಗರಿಷ್ಠ ಜೈಲು ಶಿಕ್ಷೆ ವಿಧಿಸಿರುವ ಕಾರಣ, ಈ ಶಿಕ್ಷಾ ಅವಧಿಯನ್ನು ಮೊಟಕುಗೊಳಿಸುವ ಅಧಿಕಾರವೂ ಸರ್ಕಾರಕ್ಕೆ ಇಲ್ಲದಂತಾಗಿದೆ. ಒಟ್ಟು 480 ಪುಟಗಳ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಮನವಿ: ಬೆಳಿಗ್ಗೆ ಕಲಾಪ ಆರಂಭವಾದಾಗ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವಂತೆ ನ್ಯಾಯಾಧೀಶರಿಗೆ ಖುದ್ದು ಮನವಿ ಮಾಡಿದ ಪ್ರಜ್ವಲ್‌, ‘ನಾನು ಒಮ್ಮೆ ಸಂಸದನಾಗಿ ಕೆಲಸ ಮಾಡಿದ್ದೇನೆ. ನಾನು ಅತ್ಯಾಚಾರ ಮಾಡಿದ್ದೇನೆ ಎಂದು ಯಾರೂ ಎಂದೂ ಚಕಾರ ಎತ್ತಿರಲಿಲ್ಲ. ನನ್ನ ರಾಜಕೀಯ ಜೀವನ ಮತ್ತು ಭವಿಷ್ಯವನ್ನು ಹಾಳುಮಾಡಲು ಸಂಚು ರೂಪಿಸಿ ಈ ಪ್ರಕರಣವನ್ನು ದಾಖಲಿಸಲಾಗಿದೆ. 2024ರ ಪಾರ್ಲಿಮೆಂಟ್ ಚುನಾವಣೆಯ ಮತದಾನಕ್ಕೆ 6 ದಿನ ಬಾಕಿ ಇದೆ ಎನ್ನುವಾಗ ನನ್ನ ವಿರುದ್ಧ ಈ ದೂರು ದಾಖಲು ಮಾಡಲಾಯಿತು.‌ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಈ ರೀತಿ ಮಾಡಲಾಯಿತು. ನಾನು ಹಾಸನ ಜಿಲ್ಲೆ ಆಳಿದ್ದೆ. ರಾಜಕೀಯದಲ್ಲಿ ನಾನು ಬೇಗ ಬೆಳೆದಿದ್ದೇ ನನಗೆ ಮುಳುವಾಯಿತು. ನಾನು ನನ್ನ ತಂದೆ– ತಾಯಿಯ ಮುಖ ನೋಡಿ 6 ತಿಂಗಳಾಗಿದೆ’ ಎಂದು ಕಣ್ಣೀರಿಟ್ಟರು.

ಇದೇ ವೇಳೆ, ಪ್ರಜ್ವಲ್ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲೆ ನಳಿನಾ ಮಾಯೇಗೌಡ, ‘ಪ್ರಜ್ವಲ್ ರೇವಣ್ಣ ಅವರ ತಾತ ಮಾಜಿ ಪ್ರಧಾನಿ. ಚುನಾವಣೆ ಸಂದರ್ಭದಲ್ಲಿ ಆರೋಪಿಯ ವಿಡಿಯೊ ವೈರಲ್ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ. ಸಂತ್ರಸ್ತ ಮಹಿಳೆಯ ಸಾಮಾನ್ಯ ಜೀವನಕ್ಕೆ ಯಾವುದೇ ತೊಂದರೆ ಆಗಿಲ್ಲ. ಇಂತಹ ಯುವ ರಾಜಕಾರಣಿಯನ್ನು ಜೀವನ ಪರ್ಯಂತ ಜೈಲಿನಲ್ಲಿ ಇಡುವುದು ಸರಿಯಲ್ಲ. ಹೀಗಾಗಿ, ಕನಿಷ್ಠ ಪ್ರಮಾಣದ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದ್ದರು. ಮನವಿ ಆಲಿಸಿದ್ದ ನ್ಯಾಯಾಧೀಶರು ಮಧ್ಯಾಹ್ನ ತೀರ್ಪು ಪ್ರಕಟಿಸುವುದಾಗಿ ಕಲಾಪ ಮುಂದೂಡಿದ್ದರು.

  • 480 ಪುಟಗಳ ಸುದೀರ್ಘ ತೀರ್ಪು

  • ಬಲಿಷ್ಠ ಸಾಕ್ಷಿಯಾದ ಸಂತ್ರಸ್ತೆಯ ಹೇಳಿಕೆ  

ಶಾಸನಕರ್ತ ಆರೋಪಿಯೊಬ್ಬರ ವಿರುದ್ಧದ ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ ಕಾರ್ಯ ಶ್ಲಾಘನೀಯ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕರಾರುವಕ್ಕಾದ ಫಲಿತಾಂಶ ಪಡೆಯಲಾಗಿದೆ. ಈ ಮೂಲಕ ಬಲಿಷ್ಠ ವ್ಯಕ್ತಿಯ ಅಕ್ಷಮ್ಯ ಕುಕೃತ್ಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ.
–ನ್ಯಾಯಾಧೀಶ ಸಂತೋಷ ಗಜಾನನ ಭಟ್‌

ಯಾವುದಕ್ಕೆ ಎಷ್ಟು ಶಿಕ್ಷೆ?

ಐಪಿಸಿ ಕಲಂಗಳು

  • 376(2)(ಎನ್‌): (ಪದೇ ಪದೇ ಅತ್ಯಾಚಾರ) ಈ ಕಲಂನಡಿಯ ಅಪರಾಧಕ್ಕೆ ಜೀವನ ಪರ್ಯಂತ ಕಠಿಣ ಜೈಲು ಶಿಕ್ಷೆ ಮತ್ತು ₹5 ಲಕ್ಷ ದಂಡ‌

  • 376(2)(ಕೆ): (ಪ್ರಬಲ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಈ ಕಲಂನಡಿಯ ಅಪರಾಧಕ್ಕೆ ಜೀವಾವಧಿ (ಜೀವಮಾನ ಪರ್ಯಂತ) ಜೈಲು ಶಿಕ್ಷೆ, ₹5 ಲಕ್ಷ ದಂಡ.

  • 354(ಬಿ): (ವಿವಸ್ತ್ರಗೊಳಿಸುವಾಗ ಆಕೆಯ ಮೇಲೆ ಹಲ್ಲೆ) ಈ ಕಲಂನ ಅಡಿಯ ಅಪರಾಧಕ್ಕೆ 7 ವರ್ಷ ಜೈಲು ಶಿಕ್ಷೆ ₹50 ಸಾವಿರ ದಂಡ.

  • 354-ಎ: (ಮಹಿಳೆಯ ಘನತೆಗೆ ಚ್ಯುತಿ) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25 ಸಾವಿರ ದಂಡ.

  • 354(ಸಿ): (ವಿವಸ್ತ್ರಗೊಳಿಸಿರುವ ಮಹಿಳೆಯನ್ನು ನೋಡಿ ಆನಂದಿಸುವುದು) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25 ಸಾವಿರ ದಂಡ.

  • 201: (ಅಪರಾಧ ಕೃತ್ಯದ ಸಾಕ್ಷ್ಯ ನಾಶ) ಈ ಕಲಂ ಅಡಿಯ ಅಪರಾಧಕ್ಕೆ 3 ವರ್ಷ ಶಿಕ್ಷೆ, ₹20 ಸಾವಿರ ದಂಡ.

  • 506: (ಕ್ರಿಮಿನಲ್‌ ಬೆದರಿಕೆ) ಈ ಕಲಂನ ಅಡಿಯಲ್ಲಿ 2 ವರ್ಷ ಶಿಕ್ಷೆ, ₹10 ಸಾವಿರ ದಂಡ.

  • ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66ಇ (ಖಾಸಗಿತನ ಉಲ್ಲಂಘಿಸಿ ವಿಡಿಯೊ ಮಾಡಿ, ಪ್ರಸಾರ ಮಾಡಿರುವುದು) ಈ ಕಲಂನ ಅಡಿಯ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ, ₹25 ಸಾವಿರ ದಂಡ.

ಜೈಲಿನ ಸಮವಸ್ತ್ರ, ಕೂಲಿ ನಿಗದಿ

ಅಪರಾಧಿ ಪ್ರಜ್ವಲ್‌ ರೇವಣ್ಣನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಶನಿವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಶಿಕ್ಷೆ ನಿಗದಿಯಾದ ಬಳಿಕ ಮತ್ತೆ ಅದೇ ಕಾರಾಗೃಹಕ್ಕೆ ಪ್ರಜ್ವಲ್‌ನನ್ನು ಕರೆದೊಯ್ಯ ಲಾಯಿತು. ಇದುವರೆಗೂ ವಿಚಾರಣಾಧೀನ ಕೈದಿಯಾಗಿದ್ದ ಪ್ರಜ್ವಲ್‌ ಇನ್ನು ಮುಂದೆ ಸಜಾ ಬಂದಿಯಾಗಿ ಜೈಲಿನಲ್ಲಿ ಇರಲಿದ್ದಾನೆ.

ಪ್ರಜ್ವಲ್‌ಗೆ ಕೈದಿ ಸಂಖ್ಯೆ ನೀಡಲಾಗುತ್ತದೆ. ಜತೆಗೆ ಜೈಲಿನ ಸಮವಸ್ತ್ರ ನೀಡಲಾಗುತ್ತದೆ. ಇತರೆ ಸಜಾ ಬಂದಿಗಳಂತೆಯೇ ಪ್ರಜ್ವಲ್‌ಗೂ ಕೂಲಿ ನಿಗದಿಪಡಿಸಿ ಕೆಲಸ ನೀಡಲಾಗುವುದು ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.