ADVERTISEMENT

ಮಹದಾಯಿ ವಿಚಾರ: ಜಾವಡೇಕರ್ ಪತ್ರದಲ್ಲಿ ಯಾವುದೇ ಹುರುಳಿಲ್ಲ ಎಂದ ಎಚ್‌.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 7:37 IST
Last Updated 25 ಡಿಸೆಂಬರ್ 2019, 7:37 IST
ಎಚ್‌.ಕೆ. ಪಾಟೀಲ
ಎಚ್‌.ಕೆ. ಪಾಟೀಲ    

ಹುಬ್ಬಳ್ಳಿ: ‘ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದಲ್ಲಿ ಯಾವುದೇ ಹುರುಳಿಲ್ಲ. ಪತ್ರದ ಮೂಲಕ ಮತ್ತಷ್ಟು ಗೊಂದಲ ಸೃಷ್ಟಿಸಿದ್ದಾರೆ’ ಎಂದು ಶಾಸಕ ಎಚ್‌.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಜಾವಡೇಕರ್ ಪತ್ರದಲ್ಲಿ ಏನಿದೆ ಎಂದು ಬಿಜೆಪಿಯವರು ಸಂಭ್ರಮಿಸುತ್ತಿದ್ದಾರೊ ಗೊತ್ತಿಲ್ಲ. ಯೋಜನೆಗೆ ತಡೆ ನೀಡಿದ್ದ ಕೇಂದ್ರದ ವಿರುದ್ದ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕಣ್ಣೊರೆಸಲು ತಡೆ ನೀಡಿಲ್ಲ ಎಂದು ಪತ್ರ ಬರೆದಿದ್ದಾರೆ. ಆ ಮೂಲಕ ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆಎಂದು ಹುಬ್ಬಳ್ಳಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅರಣ್ಯ ಮತ್ತು ಪರಿಸರ ಇಲಾಖೆ ಒಪ್ಪಿಗೆ ನೀಡಿದ ತಕ್ಷಣ ಯೋಜನೆ ಕೈಗೆತ್ತಿಕೊಳ್ಳಬಹುದು ಎಂದು ಜಾವಡೇಕರ್ ಹೇಳಿದ್ದಾರೆ. ಆದರೆ, ತೀರ್ಪಿನ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕೆಂಬ ಬೇಡಿಕೆಗೆ ಬಗ್ಗೆ ಎಲ್ಲೂ ಪ್ರಸ್ತಾಪಿಸದೆ, ರಾಜ್ಯದವರಿಗೆ ಮತ್ತೊಮ್ಮೆ ಮೋಸ ಮಾಡಿದ್ದಾರೆಎಂದು ಟೀಕಿಸಿದರು.

ADVERTISEMENT

ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲೂ ಬಿ.ಎಸ್. ಯಡಿಯೂರಪ್ಪ ಅವರು, ಗೋವಾ ಮುಖ್ಯಮಂತ್ರಿ ಬರೆದ ಪತ್ರವನ್ನು ಓದಿ ಜನರಿಗೆ ವಂಚಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಇಲ್ಲಿಗೆ ಬಂದು ಹುಸಿ ಭರವಸೆ ನೀಡಿ ಹೋದರು. ಈ ಕುರಿತು ವಿರೋಧ ಪಕ್ಷಗಳ ಒತ್ತಡ, ಆಗ್ರಹ ಹಾಗೂ ಬರೆದ ಪತ್ರಕ್ಕೂ ರಾಜ್ಯ ಸರ್ಕಾರ ಬೆಲೆ ಕೊಡುತ್ತಿಲ್ಲಎಂದು ಬೇಸರ ವ್ಯಕ್ತಪಡಿಸಿದರು.

‘ಗಡಿ ಮತ್ತು ನದಿ ವಿವಾದಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನಾದರೂ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು. ಈ ಬಗ್ಗೆ ವಿನಾ ಕಾರಣ ಚಕಾರ ಎತ್ತುವವರಿಗೆ ರಾಜ್ಯದ ನಿಲುವನ್ನು ಸ್ಪಷ್ಟವಾಗಿ ತಿಳಿಸಬೇಕು’ ಎಂದು ಹೇಳಿದರು.

ಒಗ್ಗಟ್ಟಿನ ಹೋರಾಟ ಅಗತ್ಯ:‘ಮಹದಾಯಿ ವಿಚಾರಕ್ಕೆ ಸಂಬಂಧಿಸಿದ ಹೋರಾಟ ವೈಯಕ್ತಿಕ ಉದ್ದೇಶದಿಂದ ಕೂಡಿರಬಾರದು. ಪಕ್ಷಾತೀತ ಹಾಗೂ ರಾಜ್ಯದ ಹಿತಾಸಕ್ತಿಯಿಂದ ಎಲ್ಲರೂ ಒಗ್ಗಟ್ಟಾಗಿ ಸಂಘಟಿತ ಹೋರಾಟ ನಡೆಸಬೇಕು. ಆ ಹಿನ್ನೆಲೆಯಲ್ಲಿ ಎಲ್ಲರೂ ಒಂದಾದರೆ, ನಮ್ಮ ಬೆಂಬಲ ಯಾವಾಗಲೂ ಇದ್ದೇ ಇದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.