ADVERTISEMENT

ಬಹಿರಂಗ ಹೇಳಿಕೆ ನೀಡಿದರೆ ಕ್ರಮ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ

ಪಕ್ಷ ಸಂಘಟನೆಗಾಗಿ ಕ್ರಮ: ದಾವಣಗೆರೆ, ಬಾಗಲಕೋಟೆ ಜಿಲ್ಲಾ ನಾಯಕರ ಸಭೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:33 IST
Last Updated 4 ಜುಲೈ 2025, 15:33 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಬೆಂಗಳೂರು: ‘ಪಕ್ಷದ ಯಾವುದೇ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಒಂದು ವೇಳೆ ಯಾರಾದರೂ  ಅಂತಹ ಹೇಳಿಕೆಗಳನ್ನು ನೀಡಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ‘ಪಕ್ಷಕ್ಕೆ ಹಾನಿಯಾಗುವಂತೆ ಬಹಿರಂಗ ಹೇಳಿಕೆ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಪಕ್ಷದ ಎಲ್ಲ ನಾಯಕರೂ ಪಕ್ಷದ ಸಂಘಟನೆಗಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಮುಂದೆ ಅವರಿಗೆ ಯಾವುದೇ ಅವಕಾಶಗಳು ಸಿಗುವುದಿಲ್ಲ. ಆದ್ದರಿಂದ ಎಲ್ಲ ನಾಯಕರು ಮೈಚಳಿ ಬಿಟ್ಟು ಪಕ್ಷಕ್ಕಾಗಿ ಶ್ರಮಿಸಬೇಕು. ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುವುದರಿಂದ ಪಕ್ಷ ಇಕ್ಕಟ್ಟಿಗೆ ಸಿಲುಕುತ್ತದೆ. ಪ್ರತಿಯೊಬ್ಬರೂ ಅವರ ಜವಾಬ್ದಾರಿ ಅರಿತು ಮಾತನಾಡಬೇಕು’ ಎಂದೂ ಜೋಶಿ ಹೇಳಿದರು.

ADVERTISEMENT

‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪದೇ ಪದೇ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡಿದ ಕಾರಣ ಅವರ ವಿರುದ್ಧ ಪಕ್ಷ ಕಠಿಣ ಕ್ರಮ ತೆಗೆದುಕೊಂಡಿತು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ವರಿಷ್ಠರು ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಸೂಕ್ತ ಸಂದರ್ಭದಲ್ಲಿ ಕ್ರಮ ಕೈಗೊಳ್ಳುತ್ತಾರೆ. ಪಕ್ಷದ ಶಿಸ್ತು ಉಲ್ಲಂಘಿಸಿ ಮಾತನಾಡಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ’ ಎಂದು ಸಲಹೆ ನೀಡಿದರು.

‘ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಿರಂತರವಾಗಿ ಗೆಲ್ಲುತ್ತಾ ಬಂದಿತ್ತು. ಈ ಬಾರಿ ಅತ್ಯಂತ ಕಡಿಮೆ ಅಂತರದಲ್ಲಿ ಸೋತಿದೆ. ಇದಕ್ಕೆ ಕಾರಣಗಳೇನು’ ಎಂಬ ಮಾಹಿತಿಯನ್ನು ಜೋಶಿ ಅವರು ಸ್ಥಳೀಯ ನಾಯಕರಿಂದ ಪಡೆದರು. ಈ ಸಭೆಯಲ್ಲಿ ಮಾಜಿ ಸಚಿವರಾದ ಎಸ್‌‍.ಎ.ರವೀಂದ್ರನಾಥ್‌, ಎಂ.ಪಿ.ರೇಣಕಾಚಾರ್ಯ, ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ‘ಎಲ್ಲರೂ ಪರಸ್ಪರ ಸಹಕಾರದಿಂದ ಚುನಾವಣೆಯಲ್ಲಿ ಕೆಲಸ ಮಾಡಿದ್ದರೆ ಬಿಜೆಪಿಗೆ ಗೆಲುವು ಸಿಗುತ್ತಿತ್ತು’ ಎಂಬುದಾಗಿ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಮಾಜಿ ಸಚಿವ ವೀರಣ್ಣ ಚರಂತಿಮಠ ಮತ್ತು ವಿಧಾನಪರಿಷತ್‌ ಸದಸ್ಯ ಪಿ.ಎಚ್‌.ಪೂಜಾರ್ ಅವರ ನಡುವಿನ ಅಸಮಾಧಾನವನ್ನು ಬಗೆಹರಿಸಲು ಪ್ರತ್ಯೇಕ ಸಭೆ ನಡೆಸಿ ಮಾಹಿತಿ ಪಡೆದರು. ಈ ಸಭೆಯಲ್ಲಿ ಇಬ್ಬರೂ ನಾಯಕರ ಬೆಂಬಲಿಗರೂ ಭಾಗವಹಿಸಿದ್ದರು.

ಪಕ್ಷದ ವರಿಷ್ಠರು ಮತ್ತು ಆರ್‌ಎಸ್‌ಎಸ್ ಸೂಚನೆ ಮೇರೆಗೆ ಪ್ರಲ್ಹಾದ ಜೋಶಿ ಅವರು ಆಂತರಿಕ ಸಮಸ್ಯೆ ಇರುವ ಜಿಲ್ಲಾ ಘಟಕಗಳ ನಾಯಕರನ್ನು ಕರೆಸಿ ನಡೆಸುತ್ತಿರುವ ಮೂರನೇ ಸಭೆ ಇದಾಗಿದೆ. ಮುಂದಿನ ದಿನಗಳಲ್ಲಿ ಇತರ ಜಿಲ್ಲೆಗಳ ಸಭೆಯನ್ನು ನಡೆಸಲಾಗುವುದು ಎಂದು ಬಿಜೆಪಿ ಮೂಲಗಳು ಹೇಳಿವೆ. ಸಭೆಯಲ್ಲಿ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಗೋವಿಂದ ಕಾರಜೋಳ ಮತ್ತು ಡಿ.ವಿ.ಸದಾನಂದಗೌಡ ಭಾಗವಹಿಸಿದ್ದರು.

ಆರ್‌ಎಸ್‌ಎಸ್ ನಿಷೇಧ ಹಗಲುಗನಸು: ಜೋಶಿ

ದೇಶದಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿಯುವುದು ಮತ್ತು ಆರ್‌ಎಸ್‌ಎಸ್‌ ಅನ್ನು ನಿಷೇಧಿಸುವುದು ಕೇವಲ ಹಗಲುಗನಸು ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು ದೇಶದಲ್ಲಿ ಆರ್‌ಎಸ್‌ಎಸ್‌ ನಿಷೇಧಿಸಲು ಪ್ರಿಯಾಂಕ್‌ ಖರ್ಗೆ ಅವರ ನಾಯಕ ರಾಹುಲ್‌ಗಾಂಧಿ ಅವರ ಅಜ್ಜಿ ಮತ್ತು ಮುತ್ತಾತ ಪ್ರಯತ್ನ ಮಾಡಿ ವಿಫಲರಾದರು. ಆರ್‌ಎಸ್‌ಎಸ್‌ ಇನ್ನೂ ವಿಸ್ತಾರವಾಗಿ ಬೆಳೆಯುತ್ತದೆ ಎಂದರು. 1975ರಲ್ಲಿ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಲು ಕಾಂಗ್ರೆಸ್‌ ಸರ್ಕಾರ ಮುಂದಾಯಿತು. ಆದರೆ ಅವರ ಸರ್ಕಾರವೇ ಬಿದ್ದು ಹೋಯಿತು. ನೆಹರೂ ಅವರು ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿದ ನಂತರ ಆಯೋಗ ರಚನೆ ಮಾಡಿದರು. ಆರ್‌ಎಸ್‌ಎಸ್‌ ಮೇಲಿನ ಆರೋಪಕ್ಕೆ ಯಾವುದೇ ಸಾಕ್ಷಿಗಳಿರಲಿಲ್ಲ ಎಂದು ಆಯೋಗ ಹೇಳಿತು. ಪ್ರಿಯಾಂಕ್ ಖರ್ಗೆ ಅವರಿಗೆ ಇತಿಹಾಸ ಗೊತ್ತಿಲ್ಲ ಎಂದು ಹೇಳಿದರು.

ಪಕ್ಷದ ಎರಡನೇ ಹಂತದ ಶುದ್ದೀಕರಣ: ಡಿವಿಎಸ್‌
ಪಕ್ಷದಲ್ಲಿ ಮೊದಲ ಹಂತದ ಶುದ್ದೀಕರಣ ಯಶಸ್ವಿಯಾಗಿದೆ. ಅಶಿಸ್ತಿನಿಂದ ವರ್ತಿಸಿದ ಹಲವರನ್ನು ಹೊರಹಾಕಲಾಗಿದೆ. ಇನ್ನಷ್ಟು ಜನರನ್ನು ಹೊರಹಾಕಿದರೆ ಪಕ್ಷ ಉಳಿಯುವುದು ಕಷ್ಟ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ಎಲ್ಲರನ್ನೂ ಸರಿ ಮಾಡುವ ಉದ್ದೇಶದಿಂದ ಎರಡನೇ ಹಂತದ ಶುದ್ದೀಕರಣ ಪ್ರಕ್ರಿಯೆ ಆರಂಭವಾಗಿದೆ. ಎಲ್ಲೆಲ್ಲಿ ಗುಂಪುಗಾರಿಕೆ ಮತ್ತು ಸಮಸ್ಯೆಗಳು ಇವೆಯೋ ಅಂತಹ ಜಿಲ್ಲೆಗಳ ನಾಯಕರನ್ನು ಕರೆಸಿ ಮಾತನಾಡಿ ಸಂಧಾನ ಮಾಡಲಾಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಏನು ಮಾಡಬೇಕು ಎಂಬ ಚಿಂತನೆ ಆರಂಭವಾಗಿದೆ. ಎಲ್ಲ ಸರಿಹೋಗಲು ಸ್ವಲ್ಪ ದಿನ ಬೇಕು ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು. ‘ಪಕ್ಷವನ್ನು ಸರಿಪಡಿಸುವ ದಿಸೆಯಲ್ಲಿ ಸಕಾರಾತ್ಮಕ ಸಂದೇಶ ಸಿಕ್ಕಿದೆ. ಪಕ್ಷಕ್ಕೆ ಬದ್ಧರಾಗಿ ಇರುವವರು ಸೇರಿ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.
ಡಿ.ವಿ.ಸದಾನಂದಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.