ADVERTISEMENT

ಬಡ್ತಿ: ಅಡಕತ್ತರಿಯಲ್ಲಿ ಸರ್ಕಾರ, ಇಂದು ಸಂಪುಟ ಸಭೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 20:15 IST
Last Updated 24 ಫೆಬ್ರುವರಿ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಡ್ತಿ ಮೀಸಲು ಕಾಯ್ದೆ ರದ್ದತಿಯಿಂದ ಹಿಂಬಡ್ತಿಗೊಂಡಿರುವ ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ವರ್ಗದ (ಎಸ್‌.ಟಿ) ನೌಕರರ ಹಿತ ಕಾಪಾಡಲು ರೂಪಿಸಿದ ಹೊಸ ಕಾಯ್ದೆ ಜಾರಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದರೂ, ಆದೇಶ ಹೊರಡಿಸುವ ವಿಷಯದಲ್ಲಿ ಉಂಟಾಗಿರುವ ಗೊಂದಲ ರಾಜ್ಯ ಸರ್ಕಾರವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.

‘ಯಾವುದೇ ಆದೇಶ ಏನೇ ಹೇಳಿದ್ದರೂ ಹೊಸ ಕಾಯ್ದೆಯಲ್ಲಿರುವಂತೆ 1978 ಏ. 27ರಿಂದ ನೀಡಿರುವ ಬಡ್ತಿ ಮತ್ತು ಜ್ಯೇಷ್ಠತೆಗಳು ಸಿಂಧುವಾಗಿರಬೇಕು ಮತ್ತು ಭಂಗ ಉಂಟಾಗಬಾರದು. ಹಿಂಬಡ್ತಿಗೊಂಡವರನ್ನು, ಹಿಂಬಡ್ತಿ ದಿನದಿಂದ ಪೂರ್ವಾನ್ವಯವಾಗುವಂತೆ ಹುದ್ದೆ ಮತ್ತು ವೇತನ ಶ್ರೇಣಿಗೆ ನಿಯೋಜಿಸಿ ಆದೇಶ ಹೊರಡಿಸಬೇಕು’ ಎಂದು ರಾಜ್ಯ ಎಸ್‌.ಸಿ ಮತ್ತು ಎಸ್‌.ಟಿ ನೌಕರರ ಸಮನ್ವಯ ಸಮಿತಿ ಪಟ್ಟು ಹಿಡಿದಿದೆ.

ಆದರೆ, ಜ್ಯೇಷ್ಠತಾ ಪಟ್ಟಿ ಇಲ್ಲದೆ ಮುಂಬಡ್ತಿ ನೀಡುವುದು ಸೂಕ್ತವಲ್ಲ. ಒಂದು ವೇಳೆ ಜ್ಯೇಷ್ಠತಾ ಪಟ್ಟಿ ಇಲ್ಲದೆ ಬಡ್ತಿ ನೀಡಿದರೆ, ನ್ಯಾಯಾಲಯ ಆ ಪಟ್ಟಿಗೆ ತಡೆ ನೀಡಿದರೆ ಕಾಯ್ದೆ ಜಾರಿಗೆ ತಂದ ಉದ್ದೇಶ ವಿಫಲವಾಗುತ್ತದೆ. ಯಾವುದೇ ಜ್ಯೇಷ್ಠತಾ ಪಟ್ಟಿ ಇಲ್ಲದೆ ಮುಂಬಡ್ತಿ ನೀಡುವುದು ಸೂಕ್ತವಲ್ಲವೆಂದು ಸುಪ್ರೀಂ ಕೋರ್ಟ್‌ ಹೇಳಿದೆ ಎನ್ನುವುದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ವಾದ.

ADVERTISEMENT

ಕಾಯ್ದೆ ಸಂಬಂಧಿಸಿ ಆದೇಶ ಹೊರಡಿಸಲು ಡಿಪಿಎಆರ್‌ ಸಿದ್ಧಪಡಿಸಿದ್ದ ಕರಡು ಮಾರ್ಗಸೂಚಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅನು ಮೋದನೆ ನೀಡಿದ್ದರು. ಆದರೆ, ಅದಕ್ಕೆ ಎಸ್‌.ಸಿ ಮತ್ತು ಎಸ್‌.ಟಿ ನೌಕರರ ಸಮನ್ವಯ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಫೆ.7ರಂದು ನಡೆದ ಸಭೆಯ ನಡಾವಳಿ ಪ್ರಕಾರದ ಕಾಯ್ದೆ ಜಾರಿಗೆ ಆದೇಶ ಹೊರಡಿಸಬೇಕೇ ಅಥವಾ ಈ ಹಿಂದೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದ ಕರಡು ಮಾರ್ಗಸೂಚಿಯಂತೆ ಆದೇಶ ಹೊರಡಿಸಬೇಕೇ ಎಂಬ ಬಗ್ಗೆ ಸೋಮವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

***

ಹಿಂಬಡ್ತಿ ಹೊಂದಿದ್ದ ಪರಿಶಿಷ್ಟ ಜಾತಿಯ ಸರ್ಕಾರಿ ಅಧಿಕಾರಿಗಳು ಹದಿನೈದು ದಿನಗಳ ಒಳಗೆ ಈ ಮೊದಲಿನ ಹುದ್ದೆಗೆ ಬಡ್ತಿ ಹೊಂದಲಿದ್ದಾರೆ.
-ಜಿ. ಪರಮೇಶ್ವ‌ರ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.