ADVERTISEMENT

ಅಧಿಕಾರಿಗಳು ಸಾಮಾಜಿಕ ಮಾಧ್ಯಮದಿಂದ ದೂರವಿರಲಿ: ಪ್ರತಾಪಸಿಂಹ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 19:45 IST
Last Updated 20 ಆಗಸ್ಟ್ 2021, 19:45 IST
ಪ‍್ರತಾಪಸಿಂಹ
ಪ‍್ರತಾಪಸಿಂಹ   

ಮೈಸೂರು: ‘ಸರ್ಕಾರದ ಅಧಿಕೃತ ಖಾತೆ ಹೊರತುಪಡಿಸಿ ಸಾಮಾಜಿಕ ಮಾಧ್ಯಮಗಳನ್ನು ಬಳಸದಂತೆ ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ನಿರ್ಬಂಧಿಸಬೇಕು’ ಎಂದು ಸಂಸದ ಪ್ರತಾಪಸಿಂಹ ಆಗ್ರಹಿಸಿದರು.

ಇಲ್ಲಿನ ಹೆಬ್ಬಾಳದ ಸಿಲ್ಪರ್ ಸ್ಪಿರಿಟ್ ಟೆಕ್ನಾಲಜಿ ಪಾರ್ಕ್‌ನಲ್ಲಿ ಶುಕ್ರವಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

‘ಹಲವು ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ತಮ್ಮ ಖಾತೆಯಲ್ಲಿ ಚಿಕ್ಕ ವಿಷಯಗಳನ್ನೇ ದೊಡ್ಡದಾಗಿ ಬರೆದುಕೊಂಡು ನಕಲಿ ಫಾಲೊವರ್‌ಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಸಿಂಗಂ ಎಂದು ಪ್ರಚಾರ ಪಡೆದು ವೈಯಕ್ತಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳ ಸರ್ಕಾರದ ಅಧಿಕೃತ ಖಾತೆಯಲ್ಲಿ ಮಾತ್ರ ವಿವರಗಳನ್ನು ದಾಖಲಿಸಬೇಕು. ವೈಯಕ್ತಿಕ ಖಾತೆಗಳ ಬಳಕೆ ಮೇಲೆ ನಿರ್ಬಂಧ ವಿಧಿಸಬೇಕು’ ಎಂದು ಪ್ರತಿಪಾದಿಸಿದರು.

‘ಪ್ರತ್ಯುತ್ತರ ನೀಡುವ ಮುಖ್ಯಮಂತ್ರಿಗಿಂತ ದೂರದೃಷ್ಟಿಯುಳ್ಳ ಮುಖ್ಯಮಂತ್ರಿ ಬೇಕು. ಎಸ್‌.ಎಂ.ಕೃಷ್ಣ ಕಾಂಗ್ರೆಸ್‌ನಿಂದ ಸಿ.ಎಂ ಆಗಿದ್ದರೂ, ಅವರು ಕೈಗೊಂಡಿದ್ದ ಹಲವು ಯೋಜನೆಗಳನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ’ ಎಂದು ಶ್ಲಾಘಿಸಿದರು.

‘ಉದ್ಯಮಗಳ ಬೆಳವಣಿಗೆಗೆ ರಸ್ತೆ ಸಂಪರ್ಕ ಮುಖ್ಯ’ ಎಂಬ ಸಂಸದರ ಪ್ರತಿಪಾದನೆಗೆ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ‘ರಸ್ತೆ ಸಂಪರ್ಕಕ್ಕಿಂತ ನೆಟ್‌, ಬ್ರಾಂಡ್‌ಬ್ಯಾಂಡ್‌ ಸಂಪರ್ಕಗಳು ಹಾಗೂ ಶಿಕ್ಷಣ ಬಹುಮುಖ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.