ADVERTISEMENT

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಎನ್‌ಐಎನಿಂದ ಮತ್ತೆ ಮೂವರು ಆರೋಪಿಗಳ ಬಂಧನ

ಪಿಟಿಐ
Published 5 ನವೆಂಬರ್ 2022, 18:22 IST
Last Updated 5 ನವೆಂಬರ್ 2022, 18:22 IST
ಪ್ರವೀಣ್ ನೆಟ್ಟಾರು
ಪ್ರವೀಣ್ ನೆಟ್ಟಾರು   

ಮಂಗಳೂರು: ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್‌ ನೆಟ್ಟಾರು ಹತ್ಯೆ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಜಿಲ್ಲೆಯ ಹಲವೆಡೆ, ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಶನಿವಾರ ಶೋಧಕಾರ್ಯ ನಡೆಸಿದೆ.ಪ್ರವೀಣ್‌ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದ ಕುನ್ಹ ಗುಡ್ಡೆಯ ಕೆ.ಮಹಮ್ಮದ್‌ ಇಕ್ಬಾಲ್‌ (ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಘಟಕದ ಅಧ್ಯಕ್ಷ), ಬೆಳ್ಳಾರೆಯ ಕೆ.ಇಸ್ಮಾಯಿಲ್‌ ಶಾಫಿ (ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ) ಹಾಗೂ ಸುಳ್ಯದ ನಾವೂರು ಗ್ರಾಮದ ಇಬ್ರಾಹಿಂ ಷಾ ಬಂಧಿತ ಆರೋಪಿಗಳು. ಆರೋಪಿಗಳ ಮನೆಗಳಿಂದ ಕೆಲವು ಡಿಜಿಟಲ್‌ ಸಾಧನಗಳು, ಪೂರಕ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಸಂಬಂಧ ಇದುವರೆಗೆ ಹತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣ
ದಲ್ಲಿ ತಲೆ ಮರೆಸಿಕೊಂಡಿರುವ ನಾಲ್ವರು ಪ್ರಮುಖ ಆರೋಪಿಗಳ ಪತ್ತೆಗೆ ಸುಳಿವು ನೀಡುವವರಿಗೆ ₹ 5 ಲಕ್ಷ
ದವರೆಗೆ ಬಹುಮಾನವನ್ನೂ ಘೋಷಿಸಿದೆ. ಈ ಪ್ರಕರಣ ತನಿಖೆ ಮುಂದುವರಿದಿದೆ ಎಂದೂ ಎನ್‌ಐಎ ಹೇಳಿದೆ.

ADVERTISEMENT

ಬೆಳ್ಳಾರೆಯಲ್ಲಿ 2022ರ ಜುಲೈ 26ರ ರಾತ್ರಿ ಪ್ರವೀಣ್‌ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು. ಎನ್‌ಐಎ ಆ.4 ರಿಂದ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಸದಸ್ಯರು ಸಮಾಜದಲ್ಲಿ ಕ್ಷೋಭೆ ಉಂಟುಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ಎನ್‌ಐಎ ಹೇಳಿದೆ.

ಎಸ್‌ಡಿಪಿಐ ಮುಖಂಡರ ಬಂಧನವಾದ ಬಳಿಕ ಟ್ವೀಟ್‌ ಮಾಡಿರುವ ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್‌ ಮಜೀದ್‌, ’ಸಂಘಟನೆಯ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮತ್ತು ಸುಳ್ಯ ಅಸೆಂಬ್ಲಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಅವರನ್ನು ಎನ್‌ಐಎ ವಿಚಾರಣೆ ಸಲುವಾಗಿ ವಶಪಡಿಸಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಎನ್‌ಐಎ ಯಾವುದೇ ಒತ್ತಡಕ್ಕೆ ಮಣಿಯದೇ ನಿಪ್ಷಕ್ಷಪಾತ ಮತ್ತು ಪ್ರಾಮಾಣಿಕ ತನಿಖೆ ನಡೆಸಲಿ ಎಂದು ಆಗ್ರಹಿಸುತ್ತೇನೆ’ ಎಂದು ಹೇಳಿದ್ದಾರೆ.

ಎನ್‌ಐಎ ಅಧಿಕಾರಿಗಳಿಂದ ವಿಚಾರಣೆ

ಎಸ್‌ಡಿಪಿಐ ಸಂಘಟನೆಯ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ನಾಲಬಂದ್ ಹಾಗೂ ಅವರ ಕುಟುಂಬದ ಸದಸ್ಯರನ್ನು ಶನಿವಾರ ಎನ್ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ, ಮಾಹಿತಿ
ಸಂಗ್ರಹಿಸಿದ್ದಾರೆ.

ಹಳೇಹುಬ್ಬಳ್ಳಿ ನೂರಾನಿ ಪ್ಲಾಟ್‌ನಲ್ಲಿರುವ ಇಸ್ಮಾಯಿಲ್‌ ಅವರ ನಿವಾಸಕ್ಕೆ ಬೆಳಿಗ್ಗೆ 4.30ಕ್ಕೆ ತೆರಳಿದ ನಾಲ್ವರು ಎನ್ಐಎ ಅಧಿಕಾರಿಗಳ ತಂಡ, 11ರವರೆಗೆ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿತು. ಪುತ್ರ ತಾಹಿರ್ ನಾಲಬಂದ್ ಬೆಳಗಾವಿಗೆ ತೆರಳಿದ್ದಾನೆ ಎಂದು ಕುಟುಂಬದವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು, ಸೋಮವಾರ (ನ.7) ಬೆಂಗಳೂರಿನ ಎನ್ಐಎ ಕಚೇರಿಗೆ ಕುಟುಂಬ ಸಮೇತರಾಗಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಡಿ ಮೊಹಲ್ಲಾದಲ್ಲಿ ದಾಳಿ (ಮೈಸೂರು ವರದಿ): ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿದ ಎನ್‌ಐಎ ಅಧಿಕಾರಿಗಳು ಪಿಎಫ್ಐ ಮುಖಂಡ ಸುಲೈಮಾನ್ ಅವರನ್ನು ವಶಕ್ಕೆ ಪಡೆದರು. ಆದರೆ ಈ ಕುರಿತು ಯಾವುದೇ ಮಾಹಿತಿಯಿಲ್ಲ ಎಂದು ಪೊಲೀಸ್ ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.