ADVERTISEMENT

ಬೋಧನಾ ಶುಲ್ಕ ಕಡಿತ: ಹೈಕೋರ್ಟ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 6:32 IST
Last Updated 25 ಫೆಬ್ರುವರಿ 2021, 6:32 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಬೋಧನಾ ಶುಲ್ಕ ಶೇ 70ರಷ್ಟು ಮಾತ್ರ ಪಡೆಯಬೇಕು ಎಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಖಾಸಗಿ ಶಾಲೆಗಳ ಸಂಘಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.

‘ಶೇ 70ರಷ್ಟು ಶುಲ್ಕ ಸಂಗ್ರಹಿಸಬೇಕು ಮತ್ತು ಶುಲ್ಕದ ವಿವರ ಒಳಗೊಂಡ ಪಟ್ಟಿ ಪ್ರಕಟಿಸಬೇಕು. ಲೆಕ್ಕಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸುತ್ತೋಲೆ ಹೊರಡಿಸಿ ಸರಿಯಲ್ಲ’ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ನಿರ್ವಹಣಾ ಒಕ್ಕೂಟ ಅರ್ಜಿಯಲ್ಲಿ ತಿಳಿಸಿದೆ.

‘ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಸಂವಿಧಾನದ 30ನೇ ವಿಧಿಯ ಪ್ರಕಾರ ರಕ್ಷಣೆ ಇದೆ. 2019-20ರಲ್ಲಿ ಸಂಗ್ರಹಿಸಿದ ಶುಲ್ಕದಲ್ಲಿ ಶೇ 30ರಷ್ಟು ಕಡಿತ ಮಾಡಬೇಕು ಎಂಬುದು ನಮ್ಮ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. 2020-21ರ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಶುಲ್ಕ ಮತ್ತು ಇತರ ಶುಲ್ಕಗಳಿಲ್ಲದ ಕಾರಣ ಶೇ 50ರಷ್ಟು ಕಡಿತ ಇದೆ. ಆನ್‌ಲೈನ್ ತರಗತಿ ನಡೆಸಲು ಶಿಕ್ಷಣ ಸಂಸ್ಥೆಗಳಿಗೆ ಖರ್ಚು ಹೆಚ್ಚಾಗುತ್ತಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ADVERTISEMENT

‘10 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, ಅಗ್ನಿ ಸುರಕ್ಷತೆಗಾಗಿ ಶಾಲಾ ಆವರಣದ ಸುತ್ತ ಸ್ಥಳಾವಕಾಶ, ಅಗ್ನಿ ಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದು ಸೇರಿ ಮೂಲಸೌಕರ್ಯ ಒದಗಿಸಬೇಕು’ ಎಂಬ ಅಂಶವನ್ನು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಕೆಎಎಂಎಸ್) ಪ್ರಶ್ನಿಸಿದೆ.

‘ಕೋವಿಡ್ ಕಾರಣದಿಂದ ಶಾಲಾ ಆಡಳಿತ ಮಂಡಳಿಗಳು ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿವೆ. ಅನೇಕ ಪೋಷಕರು ಶುಲ್ಕ ಪಾವತಿಸಿಲ್ಲ. ಮೂಲಸೌಕರ್ಯ ಒದಗಿಸುವುದು ಕಷ್ಟ’ ಎಂದು ಹೇಳಿದೆ.

ಸರ್ಕಾರಕ್ಕೆ ನೋಟಿಸ್ ನೀಡಲು ಆದೇಶಿಸಿದ ನ್ಯಾಯಮೂರ್ತಿ ಆರ್‌. ದೇವದಾಸ್ ಅವರಿದ್ದ ಪೀಠ, ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.