ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಪರೀಕ್ಷಾ ಪೂರ್ವ ತರಬೇತಿಗೆಂದು ನಿಗದಿಪಡಿಸಿರುವ ₹112.87 ಕೋಟಿ ಅನುದಾನದಲ್ಲಿ ಅಕ್ರಮ ನಡೆದಿದೆ. ಈ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಮಹೇಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ 2024–25 ರ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅರ್ಹ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಗಾಗಿ ಈ ಮೊತ್ತವನ್ನು ನಿಗದಿಪಡಿಸಿದೆ. ಈಗ ಎಸ್‌ಐ ಮತ್ತು ಕಾನ್‌ಸ್ಟೇಬಲ್ ನೇಮಕಾತಿ ನಡೆಯುತ್ತಿದೆ. ಇದಕ್ಕೆ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಉತ್ತಮ ಸಂಸ್ಥೆಗಳಿಗೆ ಟೆಂಡರ್ ನೀಡಿಲ್ಲ. ಬದಲಿಗೆ ಟೆಂಡರ್‌ನಲ್ಲಿ ಎಲ್–1 ಆಗಿದ್ದ ಕಡಿಮೆ ಗುಣಮಟ್ಟದ ತರಬೇತಿ ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ. ವಿಜಯಪುರದ ಕಬ್ಬೂರ್ ಅಕಾಡೆಮಿ ಮತ್ತು ಎಸ್.ವಿ.ವಿಸ್ಡಂ ಅಕಾಡೆಮಿಗಳಿಗೆ ₹40 ಕೋಟಿ ಟೆಂಡರ್ ನೀಡಲಾಗಿದೆ ಎಂದು ದೂರಿದರು.
ಟೆಂಡರ್ ಷರತ್ತುಗಳಲ್ಲಿ ತರಬೇತಿ ಸಂಸ್ಥೆಯು 5 ವರ್ಷಗಳ ಅನುಭವ ಹೊಂದಿರಬೇಕು ಮತ್ತು ಸಂಸ್ಥೆಯ ವಾರ್ಷಿಕ ವಹಿವಾಟು ₹9 ಕೋಟಿ ಇರಬೇಕು. ಆದರೆ ಎಸ್‌ವಿ ವಿಸ್ಡಂ ಅಕಾಡೆಮಿಗೆ ಕೇವಲ 2 ವರ್ಷದ ಅನುಭವವಿದೆ. ಈ ಸಂಸ್ಥೆ ₹9 ಕೋಟಿ ವಹಿವಾಟು ನಡೆಸಿರುವುದಕ್ಕೆ ದಾಖಲೆ ನೀಡಿಲ್ಲ ಎಂದು ಮಹೇಶ್ ಆರೋಪಿಸಿದರು.
ಪರೀಕ್ಷಾ ಪೂರ್ವ ತರಬೇತಿಗೆ ಹಿಂದೆ ಟೆಂಡರಿನ ಎಲ್–1 ವ್ಯವಸ್ಥೆ ಇರಲಿಲ್ಲ. ಆದರೆ ಈಗ ಎಲ್–1 ವ್ಯವಸ್ಥೆಯನ್ನು ಏಕೆ ಜಾರಿಗೆ ತಂದಿದೆ ಎಂದು ಪ್ರಶ್ನಿಸಿದ ಅವರು, 2025–26 ನೇ ಸಾಲಿನ ಪರೀಕ್ಷಾ ಪೂರ್ವ ತರಬೇತಿಗೆ ಟೆಂಡರ್‌ನ ಎಲ್–1 ವ್ಯವಸ್ಥೆ ಮಾಡುತ್ತಿರುವುದನ್ನು ಕೈಬಿಡಬೇಕು. ನುರಿತ ಮತ್ತು ಅತ್ಯುತ್ತಮ ಫಲಿತಾಂಶ ನೀಡುವ ಸಂಸ್ಥೆಗಳಿಗೆ ಟೆಂಡರ್ ನೀಡಬೇಕು. ಇದರಿಂದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದೆ ಎಂದು ಅವರು ಹೇಳಿದರು.
ತರಬೇತಿ ಸಂಸ್ಥೆಯ ಹೆಸರು ‘ಪರೀಕ್ಷಾ ಪೂರ್ವ ತರಬೇತಿ ಕೇಂದ್ರ’ ಎಂದು ಇತ್ತು. ಅದನ್ನು ಸಿದ್ದರಾಮಯ್ಯ ಸರ್ಕಾರ ‘ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ’ ಎಂದು ಮಾಡಿದೆ. ಡಾ.ಅಂಬೇಡ್ಕರ್ ತರಬೇತಿ ಕೇಂದ್ರ ಎಂಬುದಾಗಿ ಹೆಸರಿಸಬೇಕಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಛಲವಾದಿ ನಾರಾಯಣಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್ ಮತ್ತು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.