ADVERTISEMENT

ಯಾದಗಿರಿ: ಗೋಗಿ ಗ್ರಾಮದಲ್ಲಿ ಯುರೇನಿಯಂ ಗಣಿಗಾರಿಕೆಗೆ ಸಿದ್ಧತೆ

ದಶಕದ ಹಿಂದೆ ವಶಪಡಿಸಿಕೊಂಡಿದ್ದ ಜಮೀನು

ಟಿ.ನಾಗೇಂದ್ರ
Published 20 ಡಿಸೆಂಬರ್ 2024, 19:30 IST
Last Updated 20 ಡಿಸೆಂಬರ್ 2024, 19:30 IST
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಬಳಿ ಯುರೇನಿಯಂ ಗಣಿಗಾರಿಕೆಗಾಗಿ ಜಮೀನು ವಶಪಡಿಸಿಕೊಂಡ ಪ್ರದೇಶದಲ್ಲಿದ್ದ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿರುವುದು
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಬಳಿ ಯುರೇನಿಯಂ ಗಣಿಗಾರಿಕೆಗಾಗಿ ಜಮೀನು ವಶಪಡಿಸಿಕೊಂಡ ಪ್ರದೇಶದಲ್ಲಿದ್ದ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿರುವುದು   

ಶಹಾಪುರ (ಯಾದಗಿರಿ ಜಿಲ್ಲೆ): ದಶಕದ ಹಿಂದೆ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಯುರೇನಿಯಂ ಗಣಿಗಾರಿಕೆಗಾಗಿ ವಶಪಡಿಸಿಕೊಂಡಿದ್ದ ಜಮೀನಿನಲ್ಲಿ ಗಣಿಗಾರಿಕೆ ಆರಂಭಕ್ಕೆ ಮತ್ತೆ ಸಿದ್ಧತೆ ನಡೆದಿದೆ. ವಶಪಡಿಸಿಕೊಂಡ ಜಮೀನಿನಲ್ಲಿ ಸರ್ವೆ ಕಾರ್ಯ, ನೀಲನಕ್ಷೆ ಸಿದ್ಧಪಡಿಸಿಕೊಳ್ಳುವ ಕಾರ್ಯ ಭರದಿಂದ ಸಾಗಿದ್ದು, ಈ ಭಾಗದ ಜನರಲ್ಲಿ ಗಣಿಗಾರಿಕೆಯ ಭೀತಿ ಉಂಟಾಗಿದೆ.

‘ಭೀಮರಾಯನಗುಡಿ ಪ್ರದೇಶದಲ್ಲಿ ಭೂಸ್ವಾಧೀನ ಪಡಿಸಿಕೊಂಡಿದ್ದ ಜಮೀನಿ ನಲ್ಲಿ ಕೆಲ ವ್ಯಕ್ತಿಗಳು 15 ದಿನಗಳ ಹಿಂದೆ ಅತಿಕ್ರಮಣ ಮಾಡಿಕೊಂಡು ಶೆಡ್ ನಿರ್ಮಿಸಿದ್ದರು. ಗಣಿ ಸಿಬ್ಬಂದಿ ಜೆಸಿಬಿ ಯಂತ್ರದಿಂದ ಕೆಲ ಗಂಟೆಯಲ್ಲಿಯೇ ಅದನ್ನು ತೆರವುಗೊಳಿಸಿದ್ದಾರೆ. ಯಾವುದೇ ಮಾಹಿತಿಯನ್ನೂ ಅವರು ನೀಡಲಿಲ್ಲ. ಈಗ ಯುರೇನಿಯಂ ಗಣಿಗಾರಿಕೆಗೆ ಮರು ಜೀವ ಬಂದಿದೆ’ ಎಂಬ ಮಾಹಿತಿ ಕಂದಾಯ ಇಲಾಖೆಯ ಅಧಿಕಾರಿಗಳಿಂದ ತಿಳಿದು ಬಂದಿದೆ.

‘ತಾಲ್ಲೂಕಿನ ಗೋಗಿ, ದಿಗ್ಗಿ, ಸೈದಾಪುರ, ಉಮರದೊಡ್ಡಿ ಗ್ರಾಮದ 150ಕ್ಕೂ ಹೆಚ್ಚು ಎಕರೆ ಜಮೀನನ್ನು ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ(ಯುಸಿಐಎಲ್) ಗಣಿಗಾರಿಕೆ ಗಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದು, ರೈತರಿಗೆ ಭೂ ಪರಿಹಾರವನ್ನೂ ನೀಡಲಾಗಿದೆ. ವಶಪಡಿಸಿಕೊಂಡ ಜಮೀನಿನಲ್ಲಿ ಮೂರು ಹಂತದ ಗಣಿಗಾರಿಕೆಯ ಕೆಲಸ ಆರಂಭಗೊಳ್ಳಲಿದೆ. ಮನುಕುಲಕ್ಕೆ ಕಂಟಕವಾಗಿರುವ ಗಣಿಗಾರಿಕೆಯನ್ನು ಸ್ಥಗಿತ ಗೊಳಿಸುವಂತೆ ಹೋರಾಟ ನಡೆಸುವುದು ಅನಿವಾರ್ಯ ವಾಗಿದೆ’ ಎಂದು ಯುರೇನಿಯಂ ವಿರೋಧಿ ಹೋರಾಟ ಸಮಿತಿ ಸಂಚಾಲಕ ಯಲ್ಲಯ್ಯ ನಾಯಕ ವನದುರ್ಗ ಅವರು ತಿಳಿಸಿದರು.

ADVERTISEMENT

‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಗೋಗಿಯಲ್ಲಿ 2010ರ ನವೆಂಬರ್‌ 16ರಂದು ಸಾರ್ವಜನಿಕ ಅಹವಾಲು ಸಭೆ ನಡೆಸಿತ್ತು. ಆಗ ಭಾರತ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯನ್ನು ರದ್ದು ಮಾಡಿತ್ತು. ಅಲ್ಲದೇ ಪರಿಸರ ಇಲಾಖೆಯಿಂದಲೂ ಅನುಮತಿ ರದ್ದುಗೊಂಡಿತ್ತು’ ಎಂದು ಅವರು
ಸ್ಮರಿಸಿದರು. 

‘ಗಣಿಗಾರಿಕೆಯ ಬಗ್ಗೆ ಜಿಲ್ಲಾಡಳಿತಕ್ಕೆ ಎಲ್ಲವೂ ಗೊತ್ತಿದೆ. ಆದರೆ, ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ವಿಷಕಾರಕ ಗಣಿಗಾರಿಕೆ ಆರಂಭವಾದರೆ ದೊಡ್ಡ ಪ್ರಮಾಣದಲ್ಲಿ ಪ್ರಾಣ ಹಾನಿಯಾಗುವುದರಲ್ಲಿ ಸಂಶಯವಿಲ್ಲ. ನಾವೆಲ್ಲರೂ ನಮ್ಮ ಉಳಿವಿಗಾಗಿ ಹಾಗೂ ನಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಗೋಗಿಯಲ್ಲಿ ಯುರೇನಿಯಂ ಗಣಗಾರಿಕೆ ಸ್ಥಾಪನೆಗೆ ಅವಕಾಶ ಕೊಡದಂತೆ ಜಾಗೃತಗೊಳ್ಳುವುದು ಅಗತ್ಯವಾಗಿದೆ’ ಎನ್ನುತ್ತಾರೆ ಹೋರಾಟ ಸಮಿತಿಯ ಸದಸ್ಯರು.

ಮನುಕುಲಕ್ಕೆ ಕಂಟಕವಾದ ಯುರೇನಿಯಂ ಗಣಿಗಾರಿಕೆ ಸ್ಥಗಿತಕ್ಕೆ ಮತ್ತೆ ಹೋರಾಟಕ್ಕೆ ಸಜ್ಜಾಗಬೇಕಾಗಿದೆ.
–ಅನಂತ ಹೆಗಡೆ ಆಶೀಸರ, ಪರಿಸರವಾದಿ
ಜಮೀನಿನಲ್ಲಿ ಮುಂದಿನ ಕ್ರಮಗಳ ಬಗ್ಗೆ ಎಂಜಿನಿಯರ್ ಹಾಗೂ ಗಣಿಗಾರಿಕೆಯ ಸಿಬ್ಬಂದಿ ಸರ್ವೆ ಕಾರ್ಯ ನಡೆಸಿದ್ದಾರೆ. ಅಗತ್ಯ ಭೂದಾಖಲೆಗಳನ್ನು ನೀಡಿದ್ದೇವೆ.
–ಉಮಾಕಾಂತ ಹಳ್ಳೆ, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.