ADVERTISEMENT

ಸರ್ಕಾರಿ ವ್ಯವಸ್ಥೆಯಡಿ ಲಸಿಕೆ ವಿತರಣೆಗೆ ಸಿದ್ಧತೆ-ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 20:05 IST
Last Updated 4 ಜನವರಿ 2021, 20:05 IST
ಸುಧಾಕರ್
ಸುಧಾಕರ್   

ಬೆಂಗಳೂರು: ‘ಸರ್ಕಾರಿ ವ್ಯವಸ್ಥೆಯಡಿ ಕೋವಿಡ್ ಲಸಿಕೆ ವಿತರಿಸಲು ಸಿದ್ಧತೆ ಪೂರ್ಣಗೊಂಡಿದೆ. ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯುವ ಬಗ್ಗೆ ಚಿಂತಿಸಲಾಗುವುದು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಬ್ರಿಟನ್‌ನಿಂದ ಬಂದವರಲ್ಲಿ 34 ಮತ್ತು ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಮಂದಿ ಸೇರಿ ಒಟ್ಟು 48 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರೆಲ್ಲರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ, 10 ಮಂದಿಯಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್ ಪತ್ತೆಯಾಗಿದೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗೂ ರೋಗ ತೀವ್ರವಾಗಿ ಕಾಡಿಲ್ಲ’ ಎಂದರು.

ನ. 25ರಿಂದ ಬ್ರಿಟನ್‌ನಿಂದ 5,068 ಜನರು ಬಂದಿದ್ದಾರೆ. ಈ ಪೈಕಿ, ಡಿ. 9ರ ನಂತರ ಬಂದವರು 4,238. ಅವರಲ್ಲಿ ಇತರ ರಾಜ್ಯಗಳ ಪ್ರಯಾಣಿಕರು 810. ಬಿಬಿಎಂಪಿ ವ್ಯಾಪ್ತಿಯ 72 ಮತ್ತು ಇತರ ಕಡೆಗಳ 3 ಜನರು ಸೇರಿ ಒಟ್ಟು 75 ಮಂದಿಯನ್ನು ಪತ್ತೆ ಮಾಡಲು ಸಾಧ್ಯ ಆಗಿಲ್ಲ.

ADVERTISEMENT

‘ನಾಪತ್ತೆಯಾದ 75 ಜನರನ್ನು ಪತ್ತೆ ಮಾಡುವಂತೆ ಬಿಬಿಎಂಪಿ ಹಾಗೂ ಗೃಹ ಇಲಾಖೆಗೆ ಕೋರಲಾಗಿದೆ. ಈ ಪೈಕಿ, ಮೂವರು ವಿದೇಶಿ ವಿಳಾಸ ಹೊಂದಿದ್ದಾರೆ. ಕೆಲವು ವಿದೇಶಿ ಪ್ರಜೆಗಳ ಪಾಸ್‌ಪೋರ್ಟ್‌ನಲ್ಲಿ ಮಾಹಿತಿ ಕೊರತೆ, ಸಿಮ್ ಸಮಸ್ಯೆಯಿಂದಾಗಿ ಸಂಪರ್ಕ ಪತ್ತೆಯಾಗದೇ ಇರಬಹುದು’ ಎಂದು ಸಚಿವರು ಸ್ಪಷ್ಟಪಡಿಸಿದರು.

‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸವಾಲೊಡ್ಡಿ, ನಮ್ಮ ದೇಶದಲ್ಲೇ ಶೀಘ್ರವಾಗಿ ಕೊರೊನಾ ಲಸಿಕೆ ಆವಿಷ್ಕರಿಸಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ. ಲಸಿಕೆಯನ್ನು ಮೊದಲಿಗೆ ಕೊರೊನಾ ಯೋಧರಿಗೆ ನೀಡಬಹುದು ಎಂಬ ಅಭಿಪ್ರಾಯ ಇದೆ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆದ ಬಳಿಕ ಅಂತಿಮವಾಗಿ ಪರವಾನಗಿ ದೊರೆಯಬಹುದು. ಸಂಬಂಧಪಟ್ಟ ವಿಜ್ಞಾನಿಗಳ ಜೊತೆ ಮಾತನಾಡಿದ್ದು, ಲಸಿಕೆ ಯಶಸ್ವಿಯಾಗಿದ್ದು, ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದಿದ್ದಾರೆ’ ಎಂದೂ ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.