ADVERTISEMENT

ಅಸ್ತಿತ್ವ ರಹಿತ ಕೆರೆ–ಕುಂಟೆಗಳಿಗೂ ರಕ್ಷಣೆ: ಆರ್‌.ಅಶೋಕ

2015 ರ ತಿದ್ದುಪಡಿ ಬದಲಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 19:16 IST
Last Updated 24 ಜೂನ್ 2021, 19:16 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಕೆರೆ, ಕುಂಟೆ, ತೊರೆ ಮತ್ತು ರಾಜಕಾಲುವೆಗಳನ್ನು ರಕ್ಷಿಸಲು ಸರ್ಕಾರ ನಿರ್ಧರಿಸಿದ್ದು, ಇವುಗಳನ್ನು ಇತರ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕೆ ತಡೆ ನೀಡುವ ಕಾಯ್ದೆಗೆ ತಿದ್ದುಪಡಿ ಮಾಡಿದೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದರಿಂದ ಜಲಮೂಲಗಳು ಅಸ್ತಿತ್ವ ಕಳೆದುಕೊಂಡಿದ್ದರೂ, ಅನ್ಯ ಉದ್ದೇಶಕ್ಕೆ ಬಳಸಲು ಸಾಧ್ಯವಿಲ್ಲ.

‘2015 ರಲ್ಲಿ ಅಂದಿನ ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಿ ಕೆರೆ, ಕುಂಟೆ, ತೊರೆ ಮತ್ತು ರಾಜಕಾಲುವೆಗಳು ಸ್ವರೂಪ ಕಳೆದುಕೊಂಡಿದ್ದರೆ, ಅವುಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿತ್ತು. ನಾವು ಅದಕ್ಕೆ ತಡೆ ನೀಡುವ ಮೂಲಕ ಜಲಮೂಲಗಳನ್ನು ಉಳಿಸಿಕೊಳ್ಳಲು ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಒಂದು ವೇಳೆ ಖಾಸಗಿ ಜಮೀನುಗಳಲ್ಲಿ ಇರುವ ಹಳ್ಳ ಅಥವಾ ತೊರೆಗಳು ಅಸ್ತಿತ್ವ ಕಳೆದುಕೊಂಡು 10 ವರ್ಷಗಳು ಕಳೆದಿದ್ದರೆ, ಅವುಗಳ ಬಗ್ಗೆ ಸಮೀಕ್ಷೆ ನಡೆಸಿ ಬಳಸಿಕೊಳ್ಳಲು ಅವಕಾಶ ನೀಡಲಾಗುವುದು.ಕೆಲವು ಖಾಸಗಿ ಜಮೀನುಗಳಲ್ಲಿ ಹಳ್ಳಗಳು ಹಾದು ಹೋಗಿ ಕೊನೆಗೊಂಡಿರುತ್ತವೆ. ಮುಂದಕ್ಕೆ ಹೋಗು
ವುದಿಲ್ಲ. ಅಂತಹವುಗಳನ್ನು ಬಳಸಿಕೊಳ್ಳಬಹುದು’ ಎಂದು ಅವರು ಸ್ಪಷ್ಟಪಡಿಸಿದರು.

ಅಲ್ಲದೆ, ಗ್ರಾಮಾಂತರ ಪ್ರದೇಶಗಳಲ್ಲಿ ಕಚ್ಚಾ ರಸ್ತೆಗಳು ಜಮೀನಿನಲ್ಲಿದ್ದು, ಬಳಿಕ ಅವು ಅಸ್ತಿತ್ವ ಕಳೆದುಕೊಂಡಿದ್ದರೆ ಅವುಗಳನ್ನೂ ಬಳಸಿಕೊಳ್ಳಬಹುದು. ಆದರೆ, ಕೆರೆ, ಕುಂಟೆ ಮತ್ತು ರಾಜಕಾಲುವೆಗಳನ್ನು ಮಾತ್ರ ಮುಟ್ಟುವಂತಿಲ್ಲ ಎಂದರು.

‘2015 ರ ತಿದ್ದುಪಡಿಯಲ್ಲಿ ಅಸ್ತಿತ್ವ ಕಳೆದುಕೊಂಡ ಎಲ್ಲ ಕೆರೆ, ಕುಂಟೆ, ರಾಜಕಾಲುವೆಗಳನ್ನೂ ಬಳಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ ಬದಲಾವಣೆ ಮಾಡಿದ್ದೇವೆ. ಸ್ವರೂಪ ಕಳೆದುಕೊಂಡು ಕನಿಷ್ಠ 10 ವರ್ಷಗಳು ಕಳೆದಿರಬೇಕು ಎಂಬುದನ್ನು ಸೇರಿಸಿದ್ದೇವೆ. ಹಿಂದೆ ಅಂತಹ ನಿಯಮವೂ ಇರಲಿಲ್ಲ’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.