ADVERTISEMENT

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸ್ವಾಗತಕ್ಕೆ ಸಜ್ಜಾದ ತಲಕಾವೇರಿ

ಜನರಲ್‌ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 19:30 IST
Last Updated 5 ಫೆಬ್ರುವರಿ 2021, 19:30 IST
ಜನರಲ್‌ ತಿಮ್ಮಯ್ಯ ಮ್ಯೂಸಿಯಂ
ಜನರಲ್‌ ತಿಮ್ಮಯ್ಯ ಮ್ಯೂಸಿಯಂ   

ಮಡಿಕೇರಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಫೆ.6ರಂದು ಮಡಿಕೇರಿ ಹಾಗೂ ತಲಕಾವೇರಿಗೆ ಭೇಟಿ ನೀಡುತ್ತಿದ್ದು ಎರಡು ಕಡೆಗಳಲ್ಲೂ ಸಿದ್ಧತೆ ಕೈಗೊಳ್ಳಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.

ತಲಕಾವೇರಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ತಲಕಾವೇರಿಯ ಹೆಬ್ಬಾಗಿಲಿನಲ್ಲೇ ಸೇನೆ ಬಿಡಾರ ಹಾಕಲಾಗಿದೆ. ತಲಕಾವೇರಿ ಕ್ಷೇತ್ರದಲ್ಲಿ ರೆಡ್ ಕಾರ್ಪೆಟ್ ಹಾಕಿ ಸಿದ್ಧಗೊಳಿಸಲಾಗಿದೆ. ಇಡೀ ಕ್ಷೇತ್ರದಲ್ಲಿ ಪೊಲೀಸರು ಹಾಗೂ ಸೇನಾಪಡೆ ಹದ್ದಿನಕಣ್ಣಿಟ್ಟಿದೆ.

ಭಾಗಮಂಡಲ ಸಮೀಪದ ಚೆಟ್ಟಿಮಾನಿಯಲ್ಲಿ ಸಿದ್ಧಗೊಂಡಿರುವ ಹೆಲಿಪ್ಯಾಡ್‌ಗೆ ಶನಿವಾರ ಬೆಳಿಗ್ಗೆ 11ರ ಸುಮಾರಿಗೆ ರಾಮನಾಥ್ ಕೋವಿಂದ್ ಅವರು ಸೇನಾ ಹೆಲಿಕಾಪ್ಟರ್‌ ಮೂಲಕ ಆಗಮಿಸಲಿದ್ದಾರೆ. ಬಳಿಕ ತಲಕಾವೇರಿ ಬಿಗಿ ಭದ್ರತೆಯ ನಡುವೆ ತಲಕಾವೇರಿ ಕ್ಷೇತ್ರಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ಪೂಜೆ ಸಲ್ಲಿಸಲಿದ್ದಾರೆ.

ADVERTISEMENT

ರಾಷ್ಟ್ರಪತಿಗಳು ಚೆಟ್ಟಿಮಾನಿ– ಭಾಗಮಂಡಲ ಹಾಗೂ ತಲಕಾವೇರಿ ಮಾರ್ಗದಲ್ಲಿ ಸಂಚರಿಸುವಾಗ ಅಂಗಡಿ ಮುಂಗಟ್ಟು ಬಂದ್‌ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಅದಾದ ಮೇಲೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಡಿಕೇರಿಯ ಎಫ್‍ಎಂಸಿ ಕಾಲೇಜು ಮೈದಾನದಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್‌ಗೆ ಬರಲಿರುವ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಲ್ಲಿಂದ ಕ್ಲಬ್‌ ಮಹೀಂದ್ರಕ್ಕೆ ತೆರಳಿದ್ದಾರೆ. ಅಲ್ಲಿ ಮಧ್ಯಾಹ್ನದ ಊಟ ಸೇವಿಸಲಿದ್ದು ವಿಶ್ರಾಂತಿ ಪಡೆಯಲಿದ್ದಾರೆ. ಅದಾದ ಮೇಲೆ, ಆರ್ಮಿ ಕ್ಯಾಂಟೀನ್, ಎಲ್‍ಐಸಿ ರಸ್ತೆ ರಾಜಾಸೀಟ್ ರಸ್ತೆ ಮತ್ತು ಈಸ್ಟ್ ಎಂಡ್ ಹೊಟೇಲ್ ರಸ್ತೆ ಮೂಲಕ ಮಧ್ಯಾಹ್ನ 3ಕ್ಕೆ ತಿಮ್ಮಯ್ಯ ಮ್ಯೂಸಿಯಂ ಆಗಮಿಸಲಿದ್ದಾರೆ. ಅಲ್ಲಿಂದ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವಿಟ್ಟು ಗೌರವ ಸಲ್ಲಿಸಲಿದ್ದಾರೆ. ಬಳಿಕ ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ. 45 ನಿಮಿಷಗಳ ಕಾಲ ಮ್ಯೂಸಿಯಂನಲ್ಲೇ ಇರಲಿದ್ದಾರೆ. ಬಳಿಕ ವಾಪಸ್ ಬೆಂಗಳೂರಿಗೆ ತೆರಳಲಿದ್ದಾರೆ.

ಮ್ಯೂಸಿಯಂ ಒಳಗೆ ಹಾಗೂ ಹೊರಗೆ ಸಂಪೂರ್ಣ ಸೈನಿಕರು ಮತ್ತು ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಉಸ್ತುವಾರಿ ಸಚಿವರ ಪ್ರವಾಸ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಫೆ.6ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಬೆಳಿಗ್ಗೆ 11.05 ಗಂಟೆಗೆ ರಾಷ್ಟ್ರಪತಿ ಅವರೊಂದಿಗೆ ಜಿಲ್ಲೆಯ ವಿವಿಧ ಕಾರ್ಯಕ್ರಮ, ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಟಿ.ಎನ್.ರವಿಪ್ರಕಾಶ್ ಅವರು ತಿಳಿಸಿದ್ದಾರೆ.

ಮಡಿಕೇರಿಗೆ ಅರವಿಂದ ಲಿಂಬಾವಳಿ: ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರೂ ಶನಿವಾರ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.

ಮಧ್ಯಾಹ್ನ 3.10ಕ್ಕೆ ರಾಷ್ಟ್ರಪತಿ ಅವರೊಂದಿಗೆ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಟಿ.ಯೋಗೇಶ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.