ADVERTISEMENT

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಪ್ರೋತ್ಸಾಹ ಅಂಕ’ ನೀಡಿ

ದಸಂಸ ಮತ್ತು ರಾಜ್ಯ ರೈತ ಸಂಘಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 2:26 IST
Last Updated 27 ಜುಲೈ 2021, 2:26 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಬೆಂಗಳೂರು: ‘ಶಿಕ್ಷಣ ಇಲಾಖೆಯ ಹಠಮಾರಿ ಧೋರಣೆಯಿಂದ ಪರೀಕ್ಷೆ ಬರೆದಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಮುಂದಿನ ವಿದ್ಯಾಭ್ಯಾಸಕ್ಕೆ ಅನ್ವಯವಾಗುವಂತೆ ‘ವಿಶೇಷ ಪ್ರೋತ್ಸಾಹ ಅಂಕ’ಗಳನ್ನು ನೀಡಬೇಕು’ ಎಂದುದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ರಾಜ್ಯ ರೈತ ಸಂಘ ಒತ್ತಾಯಿಸಿವೆ.

ಸೋಮವಾರ ಇಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ,‘ಕೋವಿಡ್ ಪರಿಸ್ಥಿತಿಯನ್ನು ಮನಗಂಡು ಬೇರೆ ರಾಜ್ಯಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ರದ್ದು ಮಾಡಲಾಯಿತು. ಆದರೆ, ರಾಜ್ಯದಲ್ಲಿ ಹಠಕ್ಕೆ ಬಿದ್ದಂತೆ ಪರೀಕ್ಷೆ ನಡೆಸಲಾಯಿತು’ ಎಂದು ದೂರಿದರು.

‘ಕೋವಿಡ್‌ನಿಂದ ಗ್ರಾಮೀಣ ಭಾಗದ ಹಾಗೂ ಬಡ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಸಿಗಲಿಲ್ಲ. ಹಾಗಾಗಿ, ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಅಂಕಗಳನ್ನು ನೀಡುವ ಮೂಲಕ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಅನುವು ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಇಲಾಖೆ ಉದಾರವಾದ ಮೌಲ್ಯಮಾಪನ ಮಾರ್ಗ ಅನುಸರಿಸಿದರೂ, ಕಲಿಕೆ ಪೂರ್ಣವಾಗದ ಹಿಂದುಳಿದ, ಪರಿಶಿಷ್ಟ ವರ್ಗಗಳ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯ ತಪ್ಪಿದ್ದಲ್ಲ. ಅವರಿಗೆ ಮುಂದಿನ ಹಂತದ ಶೈಕ್ಷಣಿಕ ಆಯ್ಕೆಗಳು, ಶಿಷ್ಯವೇತನ, ಪ್ರೋತ್ಸಾಹಧನ ಸೇರಿದಂತೆ ವಿವಿಧ ಶೈಕ್ಷಣಿಕ ಸೌಲಭ್ಯಗಳಿಗೆ ಅನ್ವಯವಾಗುವಂತೆ ಪ್ರೋತ್ಸಾಹ ಅಂಕಗಳನ್ನು ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ಆ.3ಕ್ಕೆ ಪ್ರತಿಭಟನೆ: ‘ಗ್ರಾಮೀಣ ಹಾಗೂ ನಗರ ಭಾಗದ ಬಡ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ನಂತರ ತರಗತಿಗಳಿಗೆ ಸೇರಲು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ‘ಆದ್ಯತಾ ಪ್ರವೇಶ ವ್ಯವಸ್ಥೆ’ ಜಾರಿ ಮಾಡಬೇಕು. ಇದಕ್ಕಾಗಿ ಆಗಸ್ಟ್‌ 3ರಂದು ಎಲ್ಲ ಜಿಲ್ಲೆಗಳಲ್ಲಿ ರೈತ ಸಂಘ ಮತ್ತು ದಲಿತ ಸಂಘಟನೆಗಳು ಜತೆಗೂಡಿ ಪ್ರತಿಭಟನೆ ನಡೆಸಲಿದ್ದೇವೆ. ಬೆಂಗಳೂರಿನ ಮೌರ್ಯ ವೃತ್ತದಲ್ಲೂ ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆಯ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಿದ್ದೇವೆ’ ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್ ಮಾಹಿತಿ ನೀಡಿದರು.

ರೈತ ಮುಖಂಡರಾದ ಜೆ.ಎಂ.ವೀರಸಂಗಯ್ಯ, ಪಿ.ಗೋಪಾಲ್, ದಲಿತ ಮುಖಂಡರಾದ ಗುರುಪ್ರಸಾದ್ ಕೆರಗೋಡು, ವಿ.ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.