ADVERTISEMENT

ಬೆಲೆ ಏರಿಕೆ: ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜೂನ್ 2023, 14:26 IST
Last Updated 27 ಜೂನ್ 2023, 14:26 IST
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ   

ಬೆಂಗಳೂರು: ರಾಜ್ಯದಲ್ಲಿನ ತರಕಾರಿ ಬೆಲೆ ಏರಿಕೆ, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಮತ್ತು ಕಮಿಷನ್‌ ವಿಚಾರಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸರ್ಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಸರಣಿ ಟ್ವೀಟ್‌ ಮೂಲಕ ಬಿಜೆಪಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ತರಕಾರಿ ಬೆಲೆ ದುಪ್ಪಟ್ಟಾಗಿದೆ. ಚೀಲದ ತುಂಬಾ ದುಡ್ಡು ತೆಗೆದುಕೊಂಡು ಹೋಗಿ, ಜೇಬು ತುಂಬಾ ತರಕಾರಿ ತರುವಂತಾಗಿದೆ. ಇವುಗಳನ್ನೆಲ್ಲ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾದ ಕಾಂಗ್ರೆಸ್‌ ಸರ್ಕಾರ ಹಾಲಿನ ಮೇಲೆಯೂ ₹5 ಏರಿಕೆ ಮಾಡುವ ಬಗ್ಗೆ ತೂಗುಗತ್ತಿ ನೇತಾಡಿಸುತ್ತಿದೆ.

ತರಾತುರಿಯಲ್ಲಿ ಸಭೆ ನಡೆಸಿ ನೀರಿಗೆ ದರ ಏರಿಸುವುದು ಹೇಗೆ, ಭೂ ಕಂದಾಯ, ನೋಂದಣಿ ಶುಲ್ಕ ಹೀಗೆ ಎಲ್ಲಾ ವಿಭಾಗಗಳಲ್ಲೂ ತೆರಿಗೆ ಸುಂಕ ಏರಿಸಿ ಸುಲಿಗೆ ಮಾಡುವುದು ಹೇಗೆ ಎಂಬುವುದರ ಬಗ್ಗೆ ಕಾಂಗ್ರೆಸ್ ಯೋಚಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

ADVERTISEMENT

ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ನುಡಿಗೆ ಈ ಸರ್ಕಾರ ಉತ್ತಮ ಉದಾಹರಣೆಯಾಗಿದೆ. ಈಗಾಗಲೇ ಪ್ರತಿ ಕೆ.ಜಿ ಅಕ್ಕಿಗೆ ₹15ವರೆಗೆ ಬೆಲೆ ಹೆಚ್ಚಾಗಿದೆ. ಬೇಳೆ ಕಾಳುಗಳು ಶೇಕಡ 40ರಷ್ಟು ಏರಿಕೆಯಾಗಿದ್ದು, ಬ್ಯಾಡಗಿ ಮೆಣಸಿನ ಬೆಲೆ ₹850ಕ್ಕೆ ಏರಿಕೆ ಕಂಡಿದ್ದು ಕಣ್ಣಲ್ಲಿ ನೀರು ತರಿಸುತ್ತದೆ. ಜೀರಿಗೆಯ ಬೆಲೆ ₹350 ರಿಂದ ₹600ಕ್ಕೆ ಜಿಗಿದಿದೆ. ಟೊಮೆಟೊ ಕೂಡ ₹100ರ ಗಡಿ ದಾಟಿ ಯಾವ ತರಕಾರಿಗಳನ್ನು ಕೊಳ್ಳಲಾರದ ಸ್ಥಿತಿಗೆ ಗ್ರಾಹಕರು ಬಂದಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಮುಂಗಾರು ಅಸ್ತವ್ಯಸ್ತವಾಗುವ ಸೂಚನೆ ದೊರೆತು ಒಂದು ತಿಂಗಳು ಕಳೆದಿದೆ. ಆದರೆ ಆ ಬಗ್ಗೆ ವಿಚಾರ ವಿಮರ್ಶೆ ಮಾಡಲೂ ಸಿದ್ದರಾಮಯ್ಯನವರ ಸರ್ಕಾರಕ್ಕೆ ಪುರುಸೊತ್ತಿಲ್ಲ. ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗದೆ ಗ್ಯಾರಂಟಿ ಅಕ್ಕಿಯ ವಿಚಾರವನ್ನು ಕೇಂದ್ರ ಸರ್ಕಾರದ ತಲೆಗೆ ಕಟ್ಟುವುದು ಹೇಗೆ, ಖಾಸಗಿ ಹೋಟೆಲ್‌ನಲ್ಲಿ ಅಧಿಕಾರಗಳನ್ನು ಕೂರಿಸಿ ನಿಮ್ಮ ಏಜೆಂಟ್‌ ಜೊತೆ ಸಭೆ ನಡೆಸಿ ಕಮಿಷನ್‌ ಕೊಡುವುದು ಎಷ್ಟು-ಹೇಗೆ ಎಂಬ ಲೆಕ್ಕಾಚಾರಗಳಲ್ಲೇ ಕಾಂಗ್ರೆಸ್ ಸರ್ಕಾರ ಮಗ್ನವಾಗಿದೆ ಎಂದು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.