ADVERTISEMENT

‘ಪ್ರಧಾನಮಂತ್ರಿ ಫ್ರಾಡ್‌’ ಹೇಳಿಕೆ; ಪರಿಷತ್‌ನಲ್ಲಿ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 0:35 IST
Last Updated 21 ಆಗಸ್ಟ್ 2025, 0:35 IST
<div class="paragraphs"><p>ವಿಧಾನ ಪರಿಷತ್‌ ಕಲಾಪ  </p></div>

ವಿಧಾನ ಪರಿಷತ್‌ ಕಲಾಪ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪ್ರಧಾನಮಂತ್ರಿ ಫ್ರಾಡ್‌’ ಎಂಬ ಕಾಂಗ್ರೆಸ್‌ನ ನಸೀರ್‌ ಅಹ್ಮದ್‌ ಅವರ ಮಾತು ವಿಧಾನಪರಿಷತ್‌ನಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. 

ADVERTISEMENT

ವಿಧಾನಸಭೆಯಿಂದ ಅಂಗೀಕೃತವಾಗಿದ್ದ ‘ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಪರಿಷತ್‌ನಲ್ಲಿ ಮಂಡಿಸಿದರು.

ಇದರ ಬಗ್ಗೆ, ಬುಧವಾರ ತಡರಾತ್ರಿಯವರೆಗೂ ನಡೆದ ಚರ್ಚೆಯ ವೇಳೆ ನಸೀರ್ ಅಹ್ಮದ್‌ ಅವರು ‘ಪ್ರಧಾನ ಮಂತ್ರಿ ಫ್ರಾಡ್’ ಎಂದು ಹೇಳಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು, ‘ನಸೀರ್‌ ಕ್ಷಮೆ ಕೇಳಬೇಕು’ ಎಂದು ಪಟ್ಟು ಹಿಡಿದರು.  

‘ಕಡತದಿಂದ ತೆಗೆದು ಹಾಕಿದ್ದೇನೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ‘ಮತ್ತೊಮ್ಮೆ ಫ್ರಾಡ್‌ ಎಂದಿದ್ದಾರೆ. ಅವರು ಕ್ಷಮೆ ಕೇಳಬೇಕು. ಸದನದಿಂದ ಹೊರಗೆ ಹಾಕಬೇಕು. ಅನಗತ್ಯವಾಗಿ ಪ್ರಧಾನಿ ಹೆಸರು ತಂದಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

ಬಿಜಿಪಿ ಸದಸ್ಯರು ಸಭಾಪತಿಯವರ ಪೀಠದ ಮುಂದೆ ನಿಂತು ಧರಣಿ ನಡೆಸಿ, ‘ನಸೀರ್‌ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

‘ದೇಶದ ಪ್ರಧಾನಿ ಬಗ್ಗೆ ಮಾತನಾಡುವುದು ಸರಿಯಲ್ಲ, ವಾಪಸ್‌ ತೆಗೆದುಕೊಳ್ಳಲು ಸದಸ್ಯರಿಗೆ ಹೇಳಿ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಸಭಾನಾಯಕ ಬೋಸರಾಜು ಅವರಿಗೆ ಸೂಚಿಸಿದರು.

‘ಪ್ರಧಾನಿ ಬಗ್ಗೆ ಯಾರೇ ಮಾತನಾಡಿದರೂ ಸರಿಯಲ್ಲ, ದೇಶದ ನಾಯಕರು ಯಾರೇ ಇದ್ದರು ನಾವು ಮಾತನಾಡಬಾರದು’ ಎಂದು ಬೋಸರಾಜು ಹೇಳಿದರು.

‘ಬಿಜೆಪಿಯ ರವಿಯವರು ಪ್ರಧಾನಿ ಅವರನ್ನು ವಿಶ್ವಗುರು ಎಂದರು. ಎಲೆಕ್ಷನ್‌ನಲ್ಲಿ ಫ್ರಾಡ್‌ ಮಾಡಿ ಪ್ರಧಾನಮಂತ್ರಿಯಾಗಿದ್ದಾರೆ. ನೋವಿನಿಂದ ನಾನು ಹೇಳಿದ್ದೇನೆ. ವ್ಯಕ್ತಿಗತವಾಗಿ ಟೀಕೆ ಮಾಡಬೇಕೆಂದೇನೂ ಇಲ್ಲ. ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಹೇಳಿದ್ದನ್ನು ವಾಪಸ್‌ ಪಡೆಯುತ್ತೇನೆ’ ಎಂದು ನಸೀರ್‌ ಅಹ್ಮದ್ ಹೇಳಿದರು.

ನಸೀರ್‌ ಅಹ್ಮದ್‌ ಹೇಳಿಕೆಯನ್ನು ವಾಪಸ್‌ ಪಡೆದುಕೊಂಡ ನಂತರ,  ‘ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ– 2025’ಕ್ಕೆ ರಾತ್ರಿ 12ಕ್ಕೆ ಧ್ವನಿಮತದಿಂದ ಅಂಗೀಕಾರ ದೊರೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.