ADVERTISEMENT

ಪ್ರಾಂಶುಪಾಲರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ ಉನ್ನತ ಶಿಕ್ಷಣ ಇಲಾಖೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:19 IST
Last Updated 6 ಫೆಬ್ರುವರಿ 2026, 16:19 IST
<div class="paragraphs"><p>ಕರ್ನಾಟಕ ಪರೀಕ್ಷಾ ಪ್ರಾಧಿಕಾರ</p></div>

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

   

ಬೆಂಗಳೂರು: ಪಟ್ಟಿ ಪ್ರಕಟಿಸದಂತೆ ಹೈಕೋರ್ಟ್‌ ಆದೇಶವಿದ್ದರೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆ ಪ್ರಕಟಿಸಿದೆ.

310 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರ ನೇರ ಪರೀಕ್ಷೆ ನಡೆದ ಎರಡೂವರೆ ವರ್ಷಗಳ ನಂತರ 256 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಈಗ ಕಲ್ಯಾಣ ಕರ್ನಾಟಕದ 36 ಹುದ್ದೆಗಳೂ ಸೇರಿ 267 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೈಕೋರ್ಟ್‌ನ ಮುಂದಿನ ಆದೇಶದ ಷರತ್ತಿಗೆ ಒಳಪಟ್ಟು ನೇಮಕಾತಿ ಆದೇಶ ನೀಡುವಂತೆ ಸೂಚಿಸಿದೆ. 

ADVERTISEMENT

‘ಎಂಜಿನಿಯರಿಂಗ್‌ ಸೇರಿ ಇತರೆ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡಿದವರು ಆಯ್ಕೆಯಾದರೆ ನಿಯಮದಂತೆ ಅವರು ವಾರಕ್ಕೆ ಆರು ಗಂಟೆ ಯಾವ ವಿಷಯ ಬೋಧಿಸಲು ಸಾಧ್ಯ? ಇಲಾಖೆಯ ಒಳಗಿನವರ ಸೇವಾ ಜ್ಯೇಷ್ಠತೆಗೂ ಧಕ್ಕೆಯಾಗುತ್ತದೆ. ವಯೋಮಿತಿ ಇಲ್ಲದಿರುವುದರಿಂದ, ಆಯ್ಕೆಯಾದವರು ಒಂದೇ ತಿಂಗಳಿಗೆ ನಿವೃತ್ತರಾದರೆ ಮತ್ತೆ ಪ್ರಭಾರ ಅನಿವಾರ್ಯವಾಗುತ್ತದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಮಾಡಬೇಕು’ ಎಂದು ಕೋರಿ ಸರ್ಕಾರಿ ಕಾಲೇಜುಗಳ ಪ್ರಾಧ್ಯಾಪಕರು ಹಾಗೂ ಇತರೆ ನ್ಯೂನತೆಗಳ ವಿರುದ್ಧ ಕೆಲ ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.  

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಜತೆಗೆ, ಖಾಸಗಿ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್‌ ಕಾಲೇಜುಗಳು ಸೇರಿದಂತೆ ಯಾವುದೇ ಪದವಿ ಕಾಲೇಜಿನಲ್ಲಿ 15 ವರ್ಷಗಳ ಬೋಧನಾನುಭವ ಹೊಂದಿರಬೇಕು. ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು ಐದು ವರ್ಷಗಳ ನಂತರ ಪ್ರಾಂಶುಪಾಲರ ಸ್ಥಾನ ತ್ಯಜಿಸಿ, ಹಿಂದೆ ತಾವು ಕಾರ್ಯನಿರ್ವಹಿಸುತ್ತಿದ್ದ ಕರ್ತವ್ಯಕ್ಕೆ ಮರಳಬೇಕು ಎಂಬ ನಿಯಮ ರೂಪಿಸಲಾಗಿತ್ತು. ನೇರ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆ ನಡೆಸಿತ್ತು. 

15 ವರ್ಷಗಳಿಂದ ಪ್ರಾಂಶುಪಾಲರ ಹುದ್ದೆಗೆ ನೇಮಕಾತಿ ಪ್ರಕ್ರಿಯೆಗಳೇ ನಡೆದಿರಲಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಚ್‌ 2022ರಲ್ಲಿ ಅಧಿಸೂಚನೆ ಹೊರಡಿಸಿತ್ತು. ತಾಂತ್ರಿಕ ಕಾರಣಗಳಿಂದ ನಿಗದಿಯಾಗಿದ್ದ ಪರೀಕ್ಷೆಗಳನ್ನು ಎರಡು ಬಾರಿ ಮುಂದೂಡಲಾಗಿತ್ತು. ಅಂತಿಮವಾಗಿ 2023ರ ಜುಲೈ 30ರಂದು ಪರೀಕ್ಷೆ ನಡೆಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.