ADVERTISEMENT

ಖಾಸಗಿ ಬಸ್ ಪ್ರಯಾಣದರ ಶೇ 15ರಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 22:21 IST
Last Updated 5 ಆಗಸ್ಟ್ 2020, 22:21 IST
ಬಸ್ ಸಂಚಾರ–ಸಾಂದರ್ಭಿಕ ಚಿತ್ರ
ಬಸ್ ಸಂಚಾರ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಸ್ಟೇಜ್ ಕ್ಯಾರೇಜ್ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ (ಬೆಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಮತ್ತು ಮಂಗಳೂರು)ಮೊದಲ ಎರಡು ಕಿಲೋ ಮೀಟರ್‌ಗೆ‌(ಸ್ಟೇಜ್–1) ₹8, ಎರಡನೇ ಹಂತಕ್ಕೆ ₹5.75 ಮತ್ತು ನಂತರದ ಹಂತಗಳಿಗೆ ₹3.50 ದರ ನಿಗದಿ ಮಾಡಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಒಂದೂವರೆ ಪಟ್ಟು ದರ ಅನ್ವಯವಾಗಲಿದೆ.

ನಗರ ವ್ಯಾಪ್ತಿಯಲ್ಲಿ ಸಂಚರಿಸುವರಾಜ್ಯ ಸಾರಿಗೆ ನಿಗಮಗಳ ಬಸ್‌ಗಳ ಪ್ರಯಾಣದರ ನಿಗದಿ ಮಾಡುವುದನ್ನು ನಿಗಮಗಳ ವಿವೇಚನೆಗೆ ಬಿಡಲಾಗಿದೆ.

ADVERTISEMENT

ಇತರ ಮಾರ್ಗಗಳ ಸಾಮಾನ್ಯ ಸೇವೆ ಬಸ್‌ಗಳ ಕನಿಷ್ಠ ಪ್ರಯಾಣ ದರ ಮೊದಲ ಹಂತಕ್ಕೆ(6.5 ಕಿ.ಮೀ) ₹9.50, ನಂತರದ ಪ್ರತಿ ಕಿಲೋ ಮೀಟರ್‌ಗೆ ₹1 ದರ ನಿಗದಿ ಮಾಡಲಾಗಿದೆ. ಸೂಪರ್ ಡಿಲಕ್ಸ್ (ಕುಷನ್ ಆಸನ ಮತ್ತು ಹೆಡ್‌ರೆಸ್ಟ್‌ ಇರುವ) ಬಸ್‌ಗಳಿಗೆ ಮೊದಲ ಹಂತಕ್ಕೆ ಕನಿಷ್ಠ ಪ್ರಯಾಣ ದರ ₹13, ಹೈಟೆಕ್‌ ಬಸ್‌ಗಳ(ಸುಖಾಸೀನ) ಮೊದಲ ಹಂತದ ಪ್ರಯಾಣದ ದರ ₹14 ಮತ್ತು ನಂತರದ ಪ್ರತಿ ಕಿಲೋ ಮೀಟರ್‌ಗೆ ₹1.60 ನಿಗದಿ ಮಾಡಲಾಗಿದೆ.

ವಾರಂತ್ಯ ಮತ್ತು ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ದಟ್ಟಣೆ ಇದ್ದರೆ ನಿಗದಿಪಡಿಸಿದ ದರಕ್ಕಿಂತ ಎರಡು ಪಟ್ಟು ದರ ವಿಧಿಸಲು ಅವಕಾಶ ನೀಡಲಾಗಿದೆ. ಖಾಸಗಿ ಬಸ್‌ ಆಪರೇಟರ್‌ಗಳು ಮತ್ತು ರಾಜ್ಯ ಸಾರಿಗೆ ನಿಗಮಗಳ ಅಂತರ ನಗರ ಹವಾನಿಯಂತ್ರಿತ ಬಸ್‌ಗಳ ಪ್ರಯಾಣದರವನ್ನು ಬೇಡಿಕೆ ಆಧರಿಸಿ ನಿಗದಿಪಡಿಸುವುದನ್ನು ಅವರ ವಿವೇಚನೆಗೆ ಬಿಡಲಾಗಿದೆ.ಪ್ರಯಾಣದರ ಅಲ್ಲದೇಟೋಲ್ ಶುಲ್ಕವನ್ನೂ ಪ್ರಯಾಣಿಕರಿಂದಲೇ ಪಡೆಯಲು ಅವಕಾಶ ನೀಡಲಾಗಿದೆ.

‘ಎರಡು ತಿಂಗಳ ಹಿಂದೆ ಸರ್ಕಾರ ಘೋಷಣೆ ಮಾಡಿದ್ದಂತೆ ಅಧಿಸೂಚನೆಯನ್ನು ಈಗ ಹೊರಡಿಸಿದೆ. ಕೋವಿಡ್ ಸಂದರ್ಭದಲ್ಲಿ ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಕರೆದೊಯ್ಯಬೇಕಿರುವ ಕಾರಣ ದರ ಹೆಚ್ಚಳಕ್ಕೆ ಕೇಳಿದ್ದ ಅವಕಾಶವನ್ನು ನೀಡಿಲ್ಲ’ ಎಂದು ಕರ್ನಾಟಕ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.