ADVERTISEMENT

ತೆರಿಗೆ ಹೊರೆ–ಗಾಯದ ಮೇಲೆ ಬರೆ

ಡೀಸೆಲ್‌ ಮೇಲಿನ ಸೆಸ್‌ ಅನ್ನು ನಿರಂತರವಾಗಿ ಏರಿಸುತ್ತಿರುವ ಸರ್ಕಾರ * ಲಾರಿ–ಖಾಸಗಿ ಬಸ್‌ಗಳ ಮಾಲೀಕರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 16:16 IST
Last Updated 28 ಜುಲೈ 2020, 16:16 IST
ರಾಜವರ್ಮ ಬಲ್ಲಾಳ್ 
ರಾಜವರ್ಮ ಬಲ್ಲಾಳ್    

ಬೆಂಗಳೂರು: ‌ಲಾಕ್‌ಡೌನ್‌ ಸಂದರ್ಭದಲ್ಲಿಯೂ ಡೀಸೆಲ್‌ ಮೇಲಿನ ಸೆಸ್‌ ಅನ್ನು ನಿರಂತರವಾಗಿ ಏರಿಸುತ್ತಿರುವುದರಿಂದ ತೀವ್ರ ಸಂಕಷ್ಟ ಎದುರಾಗಿದೆ ಎಂದು ಲಾರಿ ಮತ್ತು ಖಾಸಗಿ ಬಸ್‌ಗಳ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

‘ಲಾಕ್‌ಡೌನ್‌ನಿಂದ ಈವರೆಗೆ ಡೀಸೆಲ್‌ ಮೇಲಿನ ಸುಂಕವನ್ನು ಶೇ 17ರಿಂದ ಶೇ 18ರಷ್ಟು ಹೆಚ್ಚಿಸಲಾಗಿದೆ. ಈ ಸೆಸ್‌ ಮತ್ತು ರಾಜ್ಯ ಜಿಎಸ್‌ಟಿ ಎಲ್ಲ ಸೇರಿ ಅಂದಾಜು ಶೇ 50ರಷ್ಟು ತೆರಿಗೆಯನ್ನೇ ಕಟ್ಟಬೇಕಾಗಿದೆ. ಲಾಕ್‌ಡೌನ್‌ನಿಂದ ಮೊದಲೇ ಸಂಕಷ್ಟದಲ್ಲಿರುವ ನಮಗೆ ಸರ್ಕಾರಗಳ ಈ ಕ್ರಮ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಬಸ್‌ ಮತ್ತು ಕಾರ್‌ ಆಪರೇಟರ್ಸ್‌ ಕಾನ್ಫೆಡರೇಷನ್‌ ಆಫ್‌ ಇಂಡಿಯಾದ (ಬಿಒಸಿಐ) ರಾಜ್ಯ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಹೇಳಿದರು.

‘ರಾಜ್ಯದಲ್ಲಿ ಸದ್ಯ, ಸುಮಾರು 4 ಲಕ್ಷ ವಾಹನಗಳು ಖಾಸಗಿ ಪ್ರಯಾಣ ಸೇವೆ ಒದಗಿಸುತ್ತಿದ್ದು, ಈ ಎಲ್ಲ ವಾಹನಗಳ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಡೀಸೆಲ್‌ ಮೇಲಿನ ಸುಂಕ ಏರಿಸಿರುವುದಷ್ಟೇ ಅಲ್ಲದೆ, ಪ್ರಯಾಣ ಟಿಕೆಟ್‌ ದರ, ಟೈರ್‌ಗಳು ಹಾಗೂ ಬಿಡಿಭಾಗಗಳ ಮೇಲೆ, ಆಯಿಲ್‌ ಮತ್ತು ಲ್ಯೂಬ್ರಿಕೆಂಟ್‌ಗಳ ಮೇಲೂ ಹೆಚ್ಚು ಜಿಎಸ್‌ಟಿ ವಿಧಿಸಲಾಗುತ್ತಿದೆ. ಟೋಲ್‌ಗಳಲ್ಲಿನ ತೆರಿಗೆಯನ್ನೂ ಹೆಚ್ಚಿಸಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

‘ಆರು ತಿಂಗಳವರೆಗೆ ಮೋಟರ್‌ ವೆಹಿಕಲ್‌ ತೆರಿಗೆಯನ್ನು ಮನ್ನಾ ಮಾಡಬೇಕು,ಸಾರ್ವಜನಿಕ ಸಾರಿಗೆ ಕ್ಷೇತ್ರದ ವಾಹನಗಳಿಗೆ ಡೀಸೆಲ್ ಮೇಲೆ ವಿಧಿಸಲಾಗುತ್ತಿರುವ ರಾಜ್ಯ ತೆರಿಗೆ ಮತ್ತು ಸೆಸ್ ಅನ್ನು ಮುಂದಿನ ಆರು ತಿಂಗಳವರೆಗೆ ಕಡಿಮೆ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಸಲ್ಲಿಸಲಾಗಿತ್ತು. ಸರ್ಕಾರ ಸ್ಪಂದಿಸಿಲ್ಲ’ ಎಂದುದೂರಿದರು.

ಅಧಿಕ ತೆರಿಗೆ:‘ರಾಜ್ಯಸರ್ಕಾರ ಡೀಸೆಲ್‌ ಮೇಲೆ ಶೇ 24ರಷ್ಟು ಜಿಎಸ್‌ಟಿ ವಿಧಿಸುತ್ತಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ಲೀಟರ್‌ಗೆ ₹18.75 ಹೆಚ್ಚುವರಿ ತೆರಿಗೆ ಸಂದಾಯವಾಗುತ್ತಿದೆ. ಇದರಲ್ಲಿ ಲೀಟರ್‌ಗೆ ₹3 ಕಡಿಮೆ ಮಾಡಿದರೆ ನಷ್ಟವೇನೂ ಆಗುವುದಿಲ್ಲ’ ಎನ್ನುತ್ತಾರೆ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ.

‘ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಿಸಿರುವುದರ ಪರಿಣಾಮ, ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತಿದೆ. ಶೇ 100ರಷ್ಟು ವಾಹನಗಳು ಸಂಚರಿಸುತ್ತಿದ್ದ ಸಂದರ್ಭದಲ್ಲಿ, ಅಂದರೆ, 2019ರ ಜೂನ್‌ನಲ್ಲಿ ₹739 ಕೋಟಿ ಬಂದಿತ್ತು. ಆದರೆ, 2020ರ ಜೂನ್‌ನಲ್ಲಿ ಶೇ 40ರಷ್ಟು ವಾಹನಗಳು ಸಂಚರಿಸಿದರೂ, ಸರ್ಕಾರಕ್ಕೆ ₹803 ಕೋಟಿ ಆದಾಯ ಹರಿದು ಬಂದಿದೆ. ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರ ತೆರಿಗೆ ವಿನಾಯಿತಿ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

‘ತೆರಿಗೆಗೆ ಸಂಬಂಧಿಸಿದ ವಿಷಯ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಅದುಸರ್ಕಾರಗಳ ಮಟ್ಟದಲ್ಲಿಯೇ ತೀರ್ಮಾನ ಆಗಬೇಕು. ನಾವು ಪ್ರತಿಕ್ರಿಯಿಸಲು ಬರುವುದಿಲ್ಲ’ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.