ADVERTISEMENT

ತೆರಿಗೆ ವಿನಾಯಿತಿ ನೀಡಿದರೆ ಮಾತ್ರ ಸಾರಿಗೆ ಸೇವೆ: ಖಾಸಗಿ ಬಸ್‌ ಮಾಲೀಕರ ನಿರ್ಣಯ

ರಾಜ್ಯದ 13 ಜಿಲ್ಲೆಗಳ ಖಾಸಗಿ ಬಸ್‌ ಮಾಲೀಕರ ಸಂಘಗಳ ಒಮ್ಮತದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 15:49 IST
Last Updated 2 ಜೂನ್ 2020, 15:49 IST

ತುಮಕೂರು: ತ್ರೈಮಾಸಿಕ ತೆರಿಗೆ ಪಾವತಿ ಮತ್ತು ವಿಮೆಯ ವಾರ್ಷಿಕ ಕಂತು ಕಟ್ಟಲು ಸರ್ಕಾರ ವಿನಾಯಿತಿ ನೀಡದಿದ್ದರೆ ಬಸ್‌ಗಳ ಸೇವೆ ನೀಡದಿರಲು 13 ಜಿಲ್ಲೆಗಳ ಖಾಸಗಿ ಬಸ್‌ ಮಾಲೀಕರ ಸಂಘಗಳು ನಿರ್ಧರಿಸಿವೆ.

ಲಾಕ್‌ಡೌನ್‌ ನಂತರ ಬಸ್‌ಗಳ ಓಡಾಟದ ಸಾಧಕ–ಬಾಧಕಗಳ ಕುರಿತು ತುಮಕೂರಿನಲ್ಲಿ ಚರ್ಚೆ ನಡೆಸಿದ ಬಸ್‌ ಮಾಲೀಕರ ಸಂಘದ ಪದಾಧಿಕಾರಿಗಳು ಈ ನಿರ್ಣಯವನ್ನು ತಿಳಿಸಿದರು.

ಮೇ 23ರಿಂದ ಅನ್ವಯ ಆಗುವಂತೆ ಎರಡು ತ್ರೈಮಾಸಿಕದ ತೆರಿಗೆಯನ್ನು ಸಂಪೂರ್ಣವಾಗಿ ಮನ್ನ ಮಾಡಬೇಕು. ತದನಂತರದ ಎರಡು ತ್ರೈಮಾಸಿಕದ ಶೇ 50 ರಷ್ಟು ತೆರಿಗೆಯನ್ನು ಮಾತ್ರ ಪಡೆಯಬೇಕು ಎಂದು ಎಲ್ಲ ಜಿಲ್ಲಾ ಸಂಘಗಳ ಅಧ್ಯಕ್ಷರು ಒಕ್ಕೊರಲಿನಿಂದ ಒತ್ತಾಯಿಸಿದರು.

ADVERTISEMENT

ತುಮಕೂರು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಬಿ.ಎಸ್‌.ಬಲಶ್ಯಾಮಸಿಂಗ್, ‘ಬಸ್‌ಗಳ ವಾರ್ಷಿಕ ವಿಮೆ ಮೊತ್ತ ಪಾವತಿಯಿಂದ ವಿನಾಯಿತಿ ನೀಡಬೇಕು. ಈ ಕುರಿತು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಅಧಿಕೃತ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.

ಚಿತ್ರದುರ್ಗ ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಟಿ.ಎ.ಲಿಂಗಾರೆಡ್ಡಿ, ‘ವಿವಿಧ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲಕ್ಕೆ ಬಡ್ಡಿ ರಹಿತವಾಗಿ ಕಂತುಗಳನ್ನು ಕಟ್ಟಲು ಅವಕಾಶ ಮಾಡಿಕೊಡಬೇಕು. ಕೈಗಾರಿಕೆ ಮತ್ತು ಮೀನುಗಾರಿಕೆಗೆ ನೀಡುವಂತೆ ಡಿಸೇಲ್‌ ಅನ್ನು ಸಾಮಾನ್ಯ ದರಕ್ಕಿಂತ ಪ್ರತಿ ಲೀಟರ್‌ಗೆ ₹10 ಕಡಿಮೆ ಮಾಡಿ, ನಮಗೆ ಮಾರಾಟ ಮಾಡಬೇಕು’ ಎಂದು ಮನವಿ ಮಾಡಿದರು.

*

ಸಂಘಗಳ ಬೇಡಿಕೆಗಳು

* ಸ್ಥಳೀಯ ಆಡಳಿತದ ಸಂಸ್ಥೆಗಳಿಂದಲೇ ಬಸ್‌ಗಳನ್ನು ಸ್ಯಾನಿಟೈಜೆಷನ್‌ ಮಾಡಿಸಬೇಕು

* ಬಸ್‌ ಚಾಲಕರು ಮತ್ತು ಸಹಾಯಕರಿಗೂ ತಲಾ ₹ 5,000 ಪರಿಹಾರಧನ ನೀಡಬೇಕು

* ಪ್ರಯಾಣ ದರವನ್ನು ಶೇ 15 ಹೆಚ್ಚಿಸಲು ಅನುಮತಿ ನೀಡಬೇಕು

* ಸೀಟುಗಳ ಸಾಮರ್ಥ್ಯದಲ್ಲಿ ಶೇ 33ರಷ್ಟು ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿಸಲಾಗುತ್ತಿದೆ. ಈ ಪ್ರಮಾಣ ಹೆಚ್ಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.