ADVERTISEMENT

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ: ಸಮಗ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 20:15 IST
Last Updated 17 ಏಪ್ರಿಲ್ 2022, 20:15 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ‘ಪಿಎಸ್‌ಐ 545 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನೊಂದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸಮಗ್ರ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಸರ್ಕಾರದಲ್ಲಿ ಅಧಿಕಾರದಲ್ಲಿರುವವರ ಬೆಂಬಲ ಇಲ್ಲದೆ ಅಕ್ರಮ ನಡೆಯಲು ಸಾಧ್ಯವಿಲ್ಲ. ನೊಂದ ಅಭ್ಯರ್ಥಿಗಳಿಗೆ ಮತ್ತು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವವರಿಗೆ ನ್ಯಾಯ ದೊರೆಯಬೇಕು. ಅಕ್ರಮಕ್ಕೆ ಅವಕಾಶ ಕೊಡುವವರಿಗೆ ಜೈಲು ಶಿಕ್ಷೆ ಆಗಬೇಕು’ ಎಂದರು.

‘ಗೃಹ ಇಲಾಖೆ ಅತ್ಯಂತ ಭ್ರಷ್ಟ. ಪೊಲೀಸರು ಎಂಜಲು ಕಾಸು ತಿಂದು ಬಿದ್ದಿದ್ದಾರೆ ಎಂದು ನೀವೇ ಹೇಳುತ್ತೀರಿ. ನಿಮ್ಮ ಅಧಿಕಾರಿಗಳ ಅಪಮಾನ ನೀವೇ ಮಾಡುತ್ತೀರಿ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಉದ್ದೇಶಿಸಿ ಹೇಳಿದ ಪ್ರಿಯಾಂಕ್‌, ‘ಅವರು ಕೆಟ್ಟ ಗೃಹಮಂತ್ರಿ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ.545 ಹುದ್ದೆಗಳ ಪೈಕಿ, 300 ಮಂದಿ ಅಕ್ರಮವಾಗಿ ಆಯ್ಕೆಯಾಗಿದ್ದು, ಪ್ರತಿ ಅಭ್ಯರ್ಥಿಯಿಂದ ಕನಿಷ್ಠ ₹ 80 ಲಕ್ಷ ಪಡೆದಿದ್ದು, ಅಲ್ಲಿಗೆ ₹ 210 ಕೋಟಿ ಅವ್ಯವಹಾರ ನಡೆದಿದೆ’ ಎಂದು ದೂರಿದರು.

ADVERTISEMENT

‘ಈ ಅಕ್ರಮದಲ್ಲಿಯೂ ಶೇ 40 ಕಮಿಷನ್‌ ಸರ್ಕಾರ ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ. ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವರು ಸುಳ್ಳು ಹೇಳಿದ್ದಾರೆ. ಗೃಹಮಂತ್ರಿಗೆ ತಮ್ಮ ಇಲಾಖೆಯಲ್ಲಿ ಏನಾಗುತ್ತಿದೆ ಎಂದು ತಿಳಿದಿಲ್ಲವೇ? ಈ ಪ್ರಕರಣ ಸರಿಯಾಗಿ ತನಿಖೆ ಮಾಡಿದರೆ ಸರ್ಕಾರದ 3-4 ವಿಕೆಟ್ ಉರುಳಲಿದೆ’ ಎಂದರು.

‘ಈ ಅಕ್ರಮವನ್ನು ಗೋಕುಲ ನಗರ ಜಿಡಿಎ ಲೇಔಟ್‌ನ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಶಾಲೆ ಬಿಜೆಪಿಯ ಪದಾಧಿಕಾರಿಗಳದ್ದು. ಗೃಹ ಸಚಿವರು ಅವರ ಮನೆಗೆ ಹೋಗಿ ಆರತಿ ಮಾಡಿಸಿಕೊಂಡಿದ್ದರು. ಈ ಅವ್ಯವಹಾರ ಮಾಡಲು ಹೋಗಿದ್ದರೆ? ಅವರು ದಿಶಾ ಸಮಿತಿ ಹಾಗೂ ನರ್ಸಿಂಗ್ ಕೌನ್ಸಿಲ್ ಸದಸ್ಯರಾಗಿದ್ದಾರೆ. ಈ ಪದಾಧಿಕಾರಿಗಳು ಈಗ ತಲೆಮರೆಸಿಕೊಂಡಿರುವುದೇಕೆ. ಸಣ್ಣ ಪುಟ್ಟವರನ್ನು ಬಂಧಿಸಿ, ಪದಾಧಿಕಾರಿಗಳನ್ನು ಯಾಕೆ ಬಂಧಿಸುತ್ತಿಲ್ಲ’ ಎಂದೂ ಪ್ರಶ್ನಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.