ADVERTISEMENT

ನನಗೇನಾದರೂ ಆದರೆ ಪ್ರಿಯಾಂಕ್‌ ಖರ್ಗೆ ಹೊಣೆ: ಛಲವಾದಿ ಆರೋಪ

ಬೆಂಗಾವಲು ರಕ್ಷಕರ ಭದ್ರತೆ ವಾಪಸ್‌ ಪಡೆದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 13:54 IST
Last Updated 17 ಅಕ್ಟೋಬರ್ 2025, 13:54 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ‘ನನಗೆ ನೀಡಿದ್ದ ಪೊಲೀಸ್‌ ಭದ್ರತೆಯನ್ನು ಸರ್ಕಾರವು ವಾಪಸ್‌ ಪಡೆದಿದೆ. ನನಗೇನಾದರೂ ಆದರೆ ಅದಕ್ಕೆ ಸರ್ಕಾರ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಹೊಣೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಮನೆಗೆ ಮೂವರು ಪೊಲೀಸರನ್ನು ಭದ್ರತೆ ನೀಡಲಾಗಿತ್ತು. ಈಗ ಅದನ್ನು ವಾಪಸ್‌ ಪಡೆದಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ನಾನು ಮಾತನಾಡದಂತೆ ಒತ್ತಡ ಸೃಷ್ಟಿಸಲು ಹೀಗೆ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ನನಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್‌ ಪಡೆದು, ರಾಜ್ಯ ವರ್ಗೀಕೃತ ಭದ್ರತಾ ಪುನರ್‌ ಪರಿಶೀಲನಾ ಸಮಿತಿಯು ಆದೇಶಿಸಿದೆ. ಇದು ಸಮಿತಿಯ ಆದೇಶವೋ ಅಥವಾ ಸರ್ಕಾರದ್ದೋ ಅಥವಾ ಪ್ರಿಯಾಂಕ್‌ ಖರ್ಗೆಯವರದ್ದೋ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಆಗಿದ್ದಾಗ ಹೋರಾಟ ಮಾಡಿ ಮನೆ ಮತ್ತು ಭದ್ರತೆಯನ್ನು ಪಡೆದುಕೊಂಡಿದ್ದರು. ನನಗೆ ನೀಡಿದ್ದ ಭದ್ರತೆ ವಾಪಸ್‌ ಪಡೆಯಲು ಯಾರು ಕಾರಣ ಎಂಬುದನ್ನು ಮುಖ್ಯಮಂತ್ರಿ ಮತ್ತು ಗೃಹಸಚಿವರು ಉತ್ತರಿಸಬೇಕು. ಇಲ್ಲದಿದ್ದಲ್ಲಿ, ನನಗೆ ನೀಡಿರುವ ಕಾರು ಮತ್ತಿತರ ಸೌಲಭ್ಯಗಳನ್ನು ವಾಪಸ್‌ ನೀಡುತ್ತೇನೆ’ ಎಂದು ಎಚ್ಚರಿಸಿದರು.

‘ನನ್ನನ್ನು ಸುಟ್ಟುಹಾಕುತ್ತೇವೆಂದು ಕೆಲವರು ಬೆದರಿಕೆ ಹಾಕಿದ್ದವರ ವಿರುದ್ಧ ಸಾಕ್ಷಿ ಸಮೇತ ದೂರು ನೀಡಿದರೂ ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಪ್ರಿಯಾಂಕ್‌ ಖರ್ಗೆ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಷ್ಟಕ್ಕೇ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಿಯಾಂಕ್‌ ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವೇ’ ಎಂದು ಪ್ರಶ್ನಿಸಿದರು.

ನಾನು ದಲಿತ ಸಂಘರ್ಷ ಸಮಿತಿಯ ಹೋರಾಟದಿಂದ ಬಂದವನು. ನನ್ನ ಹೋರಾಟದ ಬಗ್ಗೆ ಪ್ರಶ್ನಿಸುತ್ತಿರುವ ಪ್ರಿಯಾಂಕ್ ಖರ್ಗೆ ಚಿನ್ನದ ಸ್ಪೂನ್‌ ಬಾಯಲಿಟ್ಟುಕೊಂಡು ಬೆಳೆದವರು
ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ

‘ತಾಕತ್ತಿದ್ದರೆ ಚಿತ್ತಾಪುರದ ಪಥಸಂಚಲನ ತಡೆಯಲಿ’

ಕಲಬುರಗಿ: ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಧಮ್‌, ತಾಕತ್ತು ಇದ್ದರೆ ಸರ್ಕಾರದ ಅಧಿಕಾರ ಬಳಸಿ ಅ.19ರಂದು ಚಿತ್ತಾಪುರದಲ್ಲಿ ನಡೆಯುವ ಆರ್‌ಎಸ್‌ಎಸ್ ಪಥಸಂಚಲನ ತಡೆಯಲಿ ನೋಡೋಣ’ ಎಂದು ಶಿವಸೇನಾ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಸವಾಲು ಹಾಕಿದರು.

‘ಪ್ರಿಯಾಂಕ್‌ ಅವರಿಗೆ ಆರ್‌ಎಸ್‌ಎಸ್‌ ಬಗೆಗೆ ಭಯ ಶುರುವಾಗಿದೆ. ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್‌ನಿಂದಲೇ ಸೋತಿದ್ದಾರೆ ಎಂಬ ಕಾರಣಕ್ಕೆ ಈಗ ನೆಪ ಮಾಡಿಕೊಂಡು ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಿದ್ದಾರೆ’ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.‌

‘ಸಚಿವ ಖರ್ಗೆ ಅವರು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಆರ್‌ಎಸ್‌ಎಸ್‌ ಕುರಿತ ಖರ್ಗೆ ಅವರ ಮಾತುಗಳನ್ನು ಯಾವ ಹಿಂದೂವೂ ಕ್ಷಮಿಸಲಾರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಿಜಯ‌ದಶಮಿ ಸಂದರ್ಭದಲ್ಲಿ ರಾಜ್ಯದಾದ್ಯಂತ ಆರ್‌ಎಸ್‌ಎಸ್‌ನಿಂದ 100ಕ್ಕೂ ಹೆಚ್ಚು ಪಥ ಸಂಚಲನ ನಡೆದಿವೆ. ಆರ್‌ಎಸ್‌ಎಸ್‌ ವೇದಿಕೆಯಿಂದ ಒಂದೂ ಪ್ರಚೋದನಕಾರಿ ಭಾಷಣ ಬಂದಿಲ್ಲ’ ಎಂದಿದ್ದಾರೆ.

ರಾಜ್ಯದಲ್ಲಿ ಆರ್‌ಎಸ್‌ಎಸ್‌ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಯಾರೂ ಹೇಳಿಲ್ಲ. ಅದರ ಬಗ್ಗೆ ಚರ್ಚೆಯೂ ಇಲ್ಲ
ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.